ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕರಣಾ ಘಟಕ, ಹೊಸ ಮಾರುಕಟ್ಟೆಗೆ ಪ್ರಸ್ತಾವ’

ಹಾಲಿನ ಡೇರಿ ಕಟ್ಟಡ ಉದ್ಘಾಟನೆ: ವಿವಿಧ ಕಾಮಗಾರಿಗೆ ಶಾಸಕಿ ಅನಿತಾರಿಂದ ಚಾಲನೆ
Last Updated 1 ಜುಲೈ 2019, 12:18 IST
ಅಕ್ಷರ ಗಾತ್ರ

ರಾಮನಗರ: ರಾಮನಗರದಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಸುಸಜ್ಜಿತ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಮನಮಾನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ತಾಲ್ಲೂಕಿನ ಅಭಿವೃದ್ಧಿಗೆ ₨350 ಕೋಟಿ ಅನುದಾನ ತಂದಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ರೈತರಿಗೆ ಅನುಕೂಲವಾಗುವಂತೆ ಕೆಎಂಎಫ್ ನಿಂದ ಹಲವು ಜನಪರ ಯೋಜನೆಗಳು ಜಾರಿಯಾಗಿವೆ. ರೈತರಿಗೆ ವಿಮಾ ಸೌಲಭ್ಯ, ರೈತರ ಮಕ್ಕಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಇನ್ನಿತರೆ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

ರೈತರು ಹನಿ ನೀರಾವರಿಯನ್ನು ಹೆಚ್ಚಾಗಿ ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗುತ್ತದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈತರಿಗೆ ಕೃಷಿ ಲಾಭದಾಯಕವಾಗದಿದ್ದರೂ ಹೈನುಗಾರಿಕೆಯು ಪರ್ಯಾಯ ಆದಾಯವನ್ನು ತಂದುಕೊಡುವುದರಿಂದ ಹೆಚ್ಚು ಅನುಕೂಲವಾಗಿದೆ. ನೀರಿನ ಅಭಾವವಿರುವುದರಿಂದ ಲಭ್ಯ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಬೆಳೆ ತೆಗೆಯಲು ಹನಿ ನೀರಾವರಿ ಸಹಾಯಕಾರಿಯಾಗಲಿದೆ ಎಂದರು.

ಬಮೂಲ್ ನಿರ್ದೇಶಕ ಪಿ. ನಾಗರಾಜ್ ಮಾತನಾಡಿ ಪ್ರತಿದಿನ ಜಿಲ್ಲೆಯಲ್ಲಿ 8 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಂಗಲ್‍ ಬಳಿ ಕೆಎಂಎಫ್ ನಿಂದ ಹಾಲು ಉತ್ಪನ್ನಗಳ ಉತ್ಪಾದಕ ಘಟಕ ಸೇರಿದಂತೆ ಸಾವಿರ ಕೋಟಿ ರೂಪಾಯಿಗಳ ಯೋಜನೆ ಜಾರಿಗೊಳಿಸಿದ್ದೇವೆ. ಮುಖ್ಯಮಂತ್ರಿ ಅವರು ಹಾಲಿಗೆ ನೀಡಲಾಗುವ ಸಬ್ಸಿಡಿಯನ್ನು ₨5 ರಿಂದ 6ಕ್ಕೆ ಹೆಚ್ಚಿಸಿದ್ದಾರೆ. ಇದರಿಂದ ವರ್ಷಕ್ಕೆ ₨1200 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.

ಹಾಲಿಗೆ ಸಬ್ಸಿಡಿ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ರೈತರು ಸಂಘಗಳಿಗೆ ಗುಣಮಟ್ಟದ ಹಾಲನ್ನು ನೀಡಬೇಕು. ಇದರಿಂದ ಹಾಲು ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತದೆ. ಇನ್ನು ಸಂಘಗಳಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಬೇಕು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಕೆಎಂಎಫ್ ನಾಮ ನಿರ್ದೇಶಿತ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಮನಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆಂಪಯ್ಯ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಸ್.ಆರ್. ರಾಮಕೃಷ್ಣಯ್ಯ, ಗುರಲಿಂಗಯ್ಯ, ರಾಜಣ್ಣ, ಶಶಿಧರ್, ರಾಜಣ್ಣ, ಸುರೇಶ್, ಲಕ್ಕಸಂದ್ರ ಮಹದೇವ್, ಗುತ್ತಿಗೆದಾರ ಮಹಾಂತಪ್ಪ, ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ರಾಮಕೃಷ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಗುರುಲಿಂಗಯ್ಯ, ಕೆಎಂಎಫ್ ನ ಶಿವಶಂಕರ್ ಇದ್ದರು.

ಇತರೆ ಕಾರ್ಯಕ್ರಮ: ಇಲ್ಲಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಸಂದ್ರ ಗ್ರಾಮದಲ್ಲಿ ಎಂಪಿಸಿಎಸ್ ಮೇಲ್ಛಾವಣಿ ಕಟ್ಟಡ ಮತ್ತು ಅಂಬೇಡ್ಕರ್ ಭವನ, ಸುಗ್ಗನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಮುದಾಯ ಭವನ ಮತ್ತು ಸರ್ಕಾರಿ ಶಾಲಾ ಕಟ್ಟಡವನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಲೋಕಾರ್ಪಣೆ ಮಾಡಿದರು.

ಇಲ್ಲಿನ ಟಿಪ್ಪು ಸರ್ಕಲ್ ಬಳಿಯ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಶಾಸಕರ ಭವನದಲ್ಲಿ ಕುಂದು ಕೊರತೆ ಸ್ವೀಕರಿಸಿದರು.

**
ರಾಜೀನಾಮೆ ನೀಡುವುದು ವದಂತಿ
‘ಆರೇಳು ಶಾಸಕರು ರಾಜೀನಾಮೆ ನೀಡುತ್ತಾರೆ ಎನ್ನುವುದೆಲ್ಲಾ ವದಂತಿಯಾಗಿದೆ. ಸರ್ಕಾರ ಸುಭದ್ರವಾಗಿದೆ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಮನಮಾನಹಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ, ಆದರೆ ಸ್ಪೀಕರ್ ಅವರು ನನಗೆ ಯಾವ ರಾಜೀನಾಮೆಯೂ ಬಂದಿಲ್ಲ ಎನ್ನುತ್ತಿದ್ದಾರೆ. ನಾನು ಅಮೆರಿಕಾಗೆ ಹೋಗಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದ ಹೋಗಲಾಗಲಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT