ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Muda Case | ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಅಶ್ವತ್ಥ ನಾರಾಯಣಗೌಡ

Published : 27 ಸೆಪ್ಟೆಂಬರ್ 2024, 9:56 IST
Last Updated : 27 ಸೆಪ್ಟೆಂಬರ್ 2024, 9:56 IST
ಫಾಲೋ ಮಾಡಿ
Comments

ರಾಮನಗರ: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿರುವುದರಿಂದ, ಅವರು ಸಿ.ಎಂ ಹುದ್ದೆಗೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು’ ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.

‘ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷದಲ್ಲೇ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ಪರಿಶಿಷ್ಟರ ಹಣ ದುರ್ಬಳಕೆ, ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯ ಅವರ ಕುಟುಂಬವೇ ಸಿಲುಕಿದೆ. ಎಲ್ಲಾ ಪ್ರಕರಣಗಳಲ್ಲೂ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದೆ’ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ತಮ್ಮ ಮೊದಲ ಅವಧಿಯ ಸರ್ಕಾರದ ಭ್ರಷ್ಟಾಚಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನೇ ರದ್ದುಪಡಿಸಿ, ಎಸಿಬಿ ರಚಿಸಿದ್ದರು. ಸರ್ಕಾರದ ಆಣತಿ ಮೇರೆಗೆ ಕೆಲಸ ಮಾಡುತ್ತಿದ್ದ ಎಸಿಬಿಯನ್ನು ಕೋರ್ಟ್ ರದ್ದುಪಡಿಸಿ ಲೋಕಾಯುಕ್ತಕ್ಕೆ ಮರುಜೀವ ಕೊಟ್ಟಿತು. ಇದೀಗ, ಅದೇ ಲೋಕಾಯುಕ್ತದಿಂದ ಸಿದ್ದರಾಮಯ್ಯ ಅವರು ತನಿಖೆ ಎದುರಿಸುವ ಸ್ಥಿತಿ ಬಂದಿದೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಹಾಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಕುರಿತು ಬಿಜೆಪಿಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಮುಂದುವರಿಸಲಿದೆ. ಹಗರಣದ ವಿಷಯದಲ್ಲಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ನಿಜಕ್ಕೂ ಅವರು ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಹೆದರುವ ಅಗತ್ಯವೇನಿದೆ? ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕುತ್ತಿರುವ ಸರ್ಕಾರದ ನಡೆ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಲತಾ, ಮುಖಂಡರಾದ ಗೌತಮ್ ಗೌಡ, ಶಿವಾನಂದ್, ಪದ್ಮನಾಭ, ನಾಗೇಶ್, ಚಂದ್ರಶೇಖರ್, ಸುರೇಶ್, ರುದ್ರದೇವರು, ಚೇತನ್, ರಾಘು ಇತರರು ಇದ್ದರು.

ಮೈತ್ರಿಯಾದರೂ ಅಭಿಪ್ರಾಯವೇ ಬೇರೆ

‘ಮುಡಾ ಪ್ರಕರಣದಲ್ಲಿ ನಾವು ಆರಂಭದಿಂದಲೂ ಮುಖ್ಯಮಂತ್ರಿ ರಾಜೀನಾಮೆ ಕೇಳುತ್ತಿದ್ದೇವೆ. ಆದರೆ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ತನಿಖೆ ಎದುರಿಸಲಿ ಎಂದಷ್ಟೇ ಹೇಳುತ್ತಾ ಬಂದಿದ್ದಾರೆ. ಮೈಸೂರು ಪಾದಯಾತ್ರೆಯಲ್ಲೂ ಅದನ್ನೇ ಪುನರುಚ್ಛರಿಸಿದ್ದಾರೆ. ರಾಜಕೀಯ ಕಾರಣಕ್ಕೆ ನಾವು ಮೈತ್ರಿ ಮಾಡಿಕೊಂಡಿದ್ದರೂ, ಮುಡಾ ಹಗರಣದ ವಿಷಯದಲ್ಲಿ ಪಕ್ಷವಾರು ನಿಲುವು ಬೇರೆಯೇ ಇದೆ. ಹಾಗಾಗಿಯೇ ಎಚ್‌ಡಿಕೆ ಮುಖ್ಯಮಂತ್ರಿಯ ರಾಜೀನಾಮೆ ಕೇಳಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅಶ್ವತ್ಥ ನಾರಾಯಣಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT