ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಿಲೇಶ್ ಭೇಟಿಯಾದ ನಿಖಿಲ್; ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆ ಕುರಿತು ಚರ್ಚೆ

Published 16 ಜೂನ್ 2023, 6:52 IST
Last Updated 16 ಜೂನ್ 2023, 6:52 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು,  ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಅವರನ್ನು ಗುರುವಾರ ಲಖನೌನಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.

ತಮ್ಮ ನಿವಾಸಕ್ಕೆ ಬಂದ ನಿಖಿಲ್ ಅವರನ್ನು ಬರಮಾಡಿಕೊಂಡ ಅಖಿಲೇಶ್ ಅವರು, ರಾಜಕೀಯ ಸೇರಿದಂತೆ ಮೈಸೂರಿನಲ್ಲಿ ತಾವು ಕಳೆದ ಕಾಲೇಜು ದಿನಗಳ ಕುರಿತು ಮೆಲುಕು ಹಾಕಿದರು.

ತಮ್ಮ ಈ ಭೇಟಿಯ ವಿಷಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿರುವ ನಿಖಿಲ್, ‘ಅತ್ಯಂತ ವಿಶ್ವಾಸಪೂರ್ವಕ ಹಾಗೂ ಸಹೋದರ ವಾತ್ಸಲ್ಯದೊಂದಿಗೆ ಈ ಭೇಟಿ ನಡೆಯಿತು. ಲೋಕಸಭೆ ಚುನಾವಣೆ ಸೇರಿದಂತೆ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.

‘ಸಮಾಜವಾದಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಾಗೂ ಮಾಜಿ ಪ್ರಧಾನಮಂತ್ರಿಗ ಎಚ್.ಡಿ. ದೇವೇಗೌಡ ಅವರ ಕುಟುಂಬಗಳ ನಡುವಿನ ಬಾಂಧವ್ಯದ ಬಗ್ಗೆ ವಿಶೇಷವಾಗಿ ತಮ್ಮ ನೆನಪುಗಳನ್ನು ಅಖಿಲೇಶ್ ಅವರು ಮೆಲುಕು ಹಾಕಿದರು. ಮುಖ್ಯವಾಗಿ ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಕ್ಷೇಮವನ್ನು ವಿಚಾರಿಸಿದರು’ ಎಂದು  ಹೇಳಿದ್ದಾರೆ.

‘ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಅಖಿಲೇಶ್ ಚರ್ಚಿಸಿದರು. ಉತ್ತರಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಅವರು ಹಂಚಿಕೊಂಡರು’ ಎಂದಿದ್ದಾರೆ.

‘ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸುವ ಬಗ್ಗೆ ಅಖಿಲೇಶ್ ಅವರು ತಮ್ಮದೇ ಆದ ವಿಶೇಷ ಕಾರ್ಯಸೂಚಿ ರೂಪಿಸಿಕೊಂಡಿದ್ದಾರೆ. ಈಗಿನಿಂದಲೇ ಚುನಾವಣೆಯ ಸಿದ್ಧತೆಗಳನ್ನು ಭರದಿಂದ ನಡೆಸಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಸಮೀಕರಣಗಳ ಬಗ್ಗೆ ನನ್ನ ಬಳಿ ಕೂಲಂಕಷವಾಗಿ ಚರ್ಚಿಸಿದರು’ ಎಂದು ಹಂಚಿಕೊಂಡಿದ್ದಾರೆ.

‘ಮೈಸೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಖಿಲೇಶ್ ಅವರು, ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ತಮಗಿರುವ ಅಪಾರ ಗೌರವ, ಅಭಿಮಾನವನ್ನು ಹೃದಯಪೂರ್ವಕವಾಗಿ ವ್ಯಕ್ತಪಡಿಸಿದರು. ಅವರ ಪ್ರೀತಿ–ವಿಶ್ವಾಸಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸಿದ್ದೇನೆ’ ಎಂದು ನಿಖಿಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT