ಭಾನುವಾರ, ಅಕ್ಟೋಬರ್ 25, 2020
22 °C
ಪುಟ್ಟಣ್ಣ ವಿರುದ್ಧ ಜೆಡಿಎಸ್ ಅಭ್ಯರ್ಥಿ ರಂಗನಾಥ್‌ ವಾಗ್ದಾಳಿ

ನಕಲಿ ಮತದಾರರ ನೋಂದಣಿಗೆ ತಡೆ: ಪುಟ್ಟಣ್ಣ ವಿರುದ್ಧ ಜೆಡಿಎಸ್ ಅಭ್ಯರ್ಥಿ ರಂಗನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಸಾವಿರ ನಕಲಿ ಮತದಾರರನ್ನು ನೋಂದಣಿ ಮಾಡಿಕೊಂಡು ಪುಟ್ಟಣ್ಣ ಚುನಾವಣೆ ಗೆಲ್ಲಲು ಯತ್ನಿಸಿದ್ದರು. ಆದರೆ ಇದಕ್ಕೆ ನ್ಯಾಯದ ಮಾರ್ಗದಲ್ಲಿ ತಡೆ ಒಡ್ಡಿದ್ದೇವೆ’ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ನೋಂದಣಿಗೆ ಕನಿಷ್ಠ 25- 26 ವರ್ಷ ಆಗಿರಬೇಕು. ಆದರೆ 21 -25 ವಯಸ್ಸಿನ ಸಾವಿರಾರು ಮತದಾರರನ್ನು ಅಕ್ರಮವಾಗಿ ನೋಂದಾಯಿಸಲಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳ ವಾಹನ ಚಾಲಕರು, ಕ್ಲೀನರ್ ಗಳು ಹಾಗೂ ಗಾರ್ಮೆಂಟ್ಸ್ ನೌಕರರು ಸಹ ಈ ಪಟ್ಟಿಯಲ್ಲಿ ಇದ್ದರು. ಇದನ್ನು ಬೆಳಕಿಗೆ ತಂದು ನ್ಯಾಯಾಲಯದ ಮೆಟ್ಟಿಲು ಏರಿದ್ದೇವೆ. ಇದರಿಂದಾಗಿ ಪುಟ್ಟಣ್ಣ ಹತಾಶರಾಗಿದ್ದಾರೆ’ ಎಂದು ದೂರಿದರು.

"ಮೂರು ಬಾರಿ ಸದಸ್ಯರಾಗಿ ಆಯ್ಕೆಯಾದರೂ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ಬಿಇಒ, ಡಿಡಿಪಿಐ ಮೊದಲಾದ ದರ್ಜೆಯ ಅಧಿಕಾರಿಗಳನ್ನು ಹೆದರಿಸಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ. ಹಿಂದೆ ಶಿಕ್ಷಕರು-ಉಪನ್ಯಾಸಕರಿಗೆ ವೇತನ ಬಡ್ತಿ ಕೈ ತಪ್ಪಲು ಅವರೇ ಕಾರಣ. ಸರ್ಕಾರದ ಭಾಗವಾಗಿ ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸಿಲ್ಲ. ಎನ್‌ಪಿಎಸ್‌ ವಿರೋಧಿಸಿಲ್ಲ. ಶಿಕ್ಷಕ ವರ್ಗಕ್ಕೆ ಬೇಕಾದ ಸೌಲಭ್ಯ ಕೊಡಿಸಿಲ್ಲ. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೇ ಅವರ ಸಾಧನೆ’ ಎಂದು ಟೀಕಿಸಿದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಬುರ್ಲೆ ಮಾತನಾಡಿ "ಕೋವಿಡ್‌ನಿಂದಾಗಿ ಖಾಸಗಿ ಶಾಲೆ-ಕಾಲೇಜುಗಳ ಶಿಕ್ಷಕರು ಕೂಲಿ ಮಾಡುವ ಸ್ಥಿತಿ ಬಂದಿದೆ. ಶಾಲೆಗಳು ಆರಂಭ ಆಗದೇ ವೇತನ ಸಿಗುತ್ತಿಲ್ಲ. ಸರ್ಕಾರ ಈ ಶಿಕ್ಷಕರಿಗೆ ಕೂಡಲೇ ಪ್ಯಾಕೇಜ್‌ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
"ಶಿಕ್ಷಕ ವರ್ಗದ ಸಮಸ್ಯೆಗಳಿಗೆ ನಿಜವಾಗಿ ಸ್ಪಂದಿಸಿದ್ದು ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ. ಆರನೇ ವೇತನ ಆಯೋಗದ ಶಿಫಾರಸು ಜಾರಿ. ಎನ್‌ಪಿಎಸ್‌ ರದ್ದು, ಬಾಕಿ ಎಕ್ಸ್‌ಗ್ರೇಷಿಯಾ ಪಾವತಿ, ಸಹಶಿಕ್ಷಕರಿಗೆ ಬಡ್ತಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಬಲವರ್ಧನೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸಲಿದ್ದೇವೆ’ ಎಂದರು.

ಜೆಡಿಎಸ್ ರಾಜ್ಯ ವಕ್ತಾರ ಉಮೇಶ್‌, ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ರಾಜಶೇಖರ್‍, ನಿವೃತ್ತ ಪ್ರಾಚಾರ್ಯ ವನರಾಜು, ಮುಖಂಡ ಕರೀಗೌಡ ಇದ್ದರು.

ಸ್ವಂತ ಬಲದ ಮೇಲೆಯೇ ಗೆಲ್ಲುತ್ತೇನೆ ಎನ್ನುವ ಪುಟ್ಟಣ್ಣ ಬಿಜೆಪಿ ಸೇರಿದ್ದು ಯಾಕೆ? ತಾಕತ್ತಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲಿ
ಎ.ಪಿ. ರಂಗನಾಥ್‌
ಜೆಡಿಎಸ್ ಸಂಭಾವ್ಯ ಅಭ್ಯರ್ಥಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು