ಮೋದಿ ಅಲೆ ಇಲ್ಲ; ಡಿಕೆ ಸೋದರರ ಅಲೆ: ಒರಳಗಲ್ ರಮೇಶ್‌

ಮಂಗಳವಾರ, ಏಪ್ರಿಲ್ 23, 2019
31 °C
ಕನಕಪುರ ತಾಲ್ಲೂಕಿನಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ: ಕಾಂಗ್ರೆಸ್‌ ಮುಖಂಡರ ಟೀಕೆ

ಮೋದಿ ಅಲೆ ಇಲ್ಲ; ಡಿಕೆ ಸೋದರರ ಅಲೆ: ಒರಳಗಲ್ ರಮೇಶ್‌

Published:
Updated:
Prajavani

ಕನಕಪುರ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿರುವ ಡಿ.ಕೆ.ಸುರೇಶ್‌ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರವ್ಯಾಪ್ತಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆಯಾಗಲಿದೆ. ರಾಷ್ಟ್ರದಲ್ಲೇ ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಲಿದ್ದಾರೆ’ ಎಂದು ಕಸಬಾ ಹೋಬಳಿ ಅಧ್ಯಕ್ಷ ಒರಳಗಲ್ ರಮೇಶ್‌ ಹೇಳಿದರು.

ಕಸಬಾ ಹೋಬಳಿ ವ್ಯಾಪ್ತಿಯ ಶಿವನಹಳ್ಳಿ, ಗಡಸಳ್ಳಿ, ಹನುಮನಹಳ್ಳಿ, ರಾಮನಹಳ್ಳಿ, ಸೀಗೆಕೋಟೆ, ಬಿ.ಎಸ್‌.ದೊಡ್ಡಿ, ಅರಳಾಳು ಗ್ರಾಮದಲ್ಲಿ ಸುರೇಶ್‌ ಪರವಾಗಿ ಭಾನುವಾರ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.

‘ಸುರೇಶ್‌ ಅವರು ಸಂಸದರಾಗಿ ಈ ಹಿಂದೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮೋದಿ ಮತ್ತು ಬಿಜೆಪಿ ಅಲೆ ಇಲ್ಲ. ಇಲ್ಲಿ ಇರುವುದೆಲ್ಲಾ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅಲೆ ಮಾತ್ರ’ ಎಂದರು.

ಪಂಚಾಯಿತಿ ಮಾಜಿ ಅಧ್ಯಕ್ಷ ಸೀನಪ್ಪ ಮಾತನಾಡಿ, ‘ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ಡಿ.ಕೆ.ಸುರೇಶ್‌. ತಮ್ಮ ಅಧಿಕಾರದ ಅವಧಿಯಲ್ಲಿ ಅವಿಶ್ರಾಂತವಾಗಿ ನಿರಂತರವಾಗಿ 8 ವಿಧಾನಸಭಾ ಕ್ಷೇತ್ರಗಳಲ್ಲೂ ಸುತ್ತಾಡಿ ಆಯಾ ಕ್ಷೇತ್ರಗಳಲ್ಲಿನ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಕೆಲಸವನ್ನು ಎಲ್ಲರೂ ಮುಕ್ತವಾಗಿ ಶ್ಲಾಘಿಸಿದ್ದಾರೆ. ಇಂತಹ ನಾಯಕರಿಗೆ ಜನರು ಮತ ನೀಡದೆ, ಸುಮ್ಮನೆ ಮಾತನಾಡುವವರಿಗೆ ಮತ ನೀಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ತಾಲ್ಲೂಕಿನ ಯಾವ ಬೂತ್‌ನಲ್ಲಿಯೂ ಬಿಜೆಪಿ ಎರಡಂಕಿ ದಾಟುವುದಿಲ್ಲ. 100ಕ್ಕೆ 95ರಷ್ಟು  ಮತ ಡಿ.ಕೆ.ಸುರೇಶ್‌ಗೆ ಬರಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಸಿ.ಬಿ.ಧನಲಕ್ಷ್ಮಿ ಚಂದ್ರನಾಯ್ಕ್‌ ಮಾತನಾಡಿ, ‘ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಒಟ್ಟಾಗಿ ಮನೆಗಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಶಾಂತಕುಮಾರ್‌, ಮುಖಂಡರಾದ ವೀರಭದ್ರಯ್ಯ, ಹಲಗಪ್ಪ, ಪುಟ್ಟಸ್ವಾಮಿ, ದೊಡ್ಡಣ್ಣ, ನಾಗರಾಜು, ಕುಳ್ಳಪ್ಪ, ಸಣ್ಣಪ್ಪ, ಕೆಂಚಪ್ಪ, ಶಿವಣ್ಣ, ಕುಳ್ಳೇಗೌಡ, ಸಿದ್ದಪ್ಪ, ಸೀಗೆಕೋಟೆ ವೀರಭದ್ರಯ್ಯ, ಈರೇಗೌಡ, ಮಾದೇವಯ್ಯ, ಶಿವಲಿಂಗಯ್ಯ, ಚಿಕ್ಕಯ್ಯ, ಮುತ್ತ, ನವೀನ್‌, ಗಿರೀಶ್‌, ಕುಮಾರ್‌ನಾಯ್ಕ, ಚಂದ್ರನಾಯ್ಕ, ಉಮೇಶ್‌ ನಾಯ್ಕ, ಹರಿನಾಯ್ಕ ಸೇರಿದಂತೆ ಅನೇಕ ಮುಖಂಡರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !