ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಪುನರಾರಂಭಕ್ಕೆ ಸೂಚನೆ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ತರಾಟೆ
Last Updated 24 ನವೆಂಬರ್ 2022, 2:56 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಿತು.

ಶಾಸಕ ಎ. ಮಂಜುನಾಥ್ ಮಾತನಾಡಿ, ‘ವಿಳಂಬವಾಗಿರುವ ರಸ್ತೆ ಕಾಮಗಾರಿಯನ್ನು ಕೇಶಿಪ್ ಅಧಿಕಾರಿಗಳು ಕೂಡಲೇ ಪುನರ್‌ ಆರಂಭಿಸಿ, ನಿಗದಿತ ಸಮಯದೊಳಗೆ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಬೇಕು’ ಎಂದು ಸೂಚಿಸದರು.

ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ತಾಳೆಕೆರೆ ಹ್ಯಾಂಡ್‌ ಪೊಸ್ಟ್‌ ಬಗ್ಗೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಮಧ್ಯೆ ಹತ್ತಾರು ಕಡೆ ಕಾಮಗಾರಿ ಸ್ಥಗಿತಗೊಂಡಿದೆ. ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರ ದಾಖಲಾತಿ ಪರಿಶೀಲಿಸಿ ಪರಿಹಾರ ಕೊಡಿಸಲಾಗಿದೆ. ಕೆಲವು ಕಡೆ ಭೂಮಿ ದಾಖಲಾತಿಗಳು ಸೂಕ್ತವಾಗಿಲ್ಲದ ಕಾರಣ ಪರಿಹಾರ ನೀಡುವುದು ವಿಳಂಬವಾಗಿದೆ ಎಂದರು .

‘ಅಧಿಕಾರಿಗಳು ಪ್ರತಿ ಹಳ್ಳಿಯ ಬಳಿ ರೈತರಿಗೆ ತೋಟ, ಹೊಲಗದ್ದೆಗಳಿಗೆ ಹೋಗಿ ಬರಲು ಕಡ್ಡಾಯವಾಗಿ ಸರ್ವೀಸ್‌ ರಸ್ತೆ ನಿರ್ಮಿಸಬೇಕು. ರಸ್ತೆ ನಿರ್ಮಾಣಕ್ಕೆ ಕಷ್ಟ ಪಟ್ಟು ಅನುದಾನ ತಂದಿದ್ದೇವೆ. ನಿಮ್ಮ ಬೇಜಾವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ಕೇಶಿಪ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ಸುಸಜ್ಜಿತ ಸರ್ಕಲ್‌ ನಿರ್ಮಿಸಬೇಕು. ಜಮಾಲ್‌ ಪಾಳ್ಯದ ಬಳಿ ರಸ್ತೆ ಅಗಲೀಕರಣಕ್ಕೆ ಅಂಗಡಿಗಳನ್ನು ಕೆಡವಿದ್ದು, ಮುಸ್ಲಿಂ ಸ್ಮಶಾನ ಇರುವಲ್ಲಿ ಅಂಗಡಿ ಮಳಿಗೆ ನಿರ್ಮಿಸಿಕೊಡಬೇಕು ಎಂದರು.

ಅಲಕ್ಷ್ಯ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಲ್ಲಿ ಕೆಲವು ವೈದ್ಯರು ಮತ್ತು ಸಿಬ್ಬಂದಿ ಅಲಕ್ಷ್ಯ ವಹಿಸಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಸ್ಪಂದಿಸಿ, ಸೂಕ್ತ ರೀತಿಯ ಚಿಕಿತ್ಸೆ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅವರಿಗೆ ಎಚ್ಚರಿಕೆ ನೀಡಲಾಯಿತು.

ಚಕ್ರಬಾವಿ, ಮಣಿಗನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅರ್ಧಕ್ಕೆ ನಿಲ್ಲಿಸಿರುವುದರ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾ.ಪಂ ಇಒ ಚಂದ್ರು, ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌, ಕೆಡಿಪಿ ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT