ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷ ಕಳೆದರೂ ಮುಗಿಯದ ಕಾಮಗಾರಿ

Last Updated 22 ಜೂನ್ 2018, 14:12 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಚನ್ನಪಟ್ಟಣ-ಕೋಡಂಬಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೋಡಂಬಹಳ್ಳಿ ಬಳಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಗೆದು ವರ್ಷ ಕಳೆದಿದ್ದರೂ ರಿಪೇರಿ ಮಾಡದೆ ಹಾಗೆಯೇ ಬಿಡಲಾಗಿದೆ ಎಂದು ಕೋಡಂಬಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಪ್ರೌಢಶಾಲೆಯ ಎದುರಿನಲ್ಲಿರುವ ರಸ್ತೆಯನ್ನು ಅಗೆದು ಹಾಗೆಯೆ ಬಿಡಲಾಗಿದೆ. ಇಲ್ಲಿ ಗುಂಡಿ ಬಿದ್ದು ರಸ್ತೆಯೆಲ್ಲಾ ಹಾಳಾಗಿದ್ದು, ಎಷ್ಟೋ ಮಂದಿ ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳಿವೆ ಎಂದು ಗ್ರಾಮದ ಮುಖಂಡ ನಾಗರಾಜು ವಿವರಿಸಿದ್ದಾರೆ.

ಚನ್ನಪಟ್ಟಣದಿಂದ ಕೋಡಂಬಹಳ್ಳಿವರೆಗೆ ಉತ್ತಮವಾಗಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಶಾಲೆಯ ಎದುರಿನಲ್ಲಿ ಮಾತ್ರ ರಸ್ತೆ ಅಭಿವೃದ್ಧಿ ಮಾಡಿಲ್ಲ. ಒಂದು ವರ್ಷದ ಹಿಂದೆ ರಸ್ತೆಯನ್ನು ಅಗೆಯಲಾಗಿತ್ತು. ಆದರೆ ಇಂದಿಗೂ ಆ ರಸ್ತೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ರವಿಶಂಕರ್, ಮಹೇಶ್ ತಿಳಿಸಿದ್ದಾರೆ.

ಈಗ ಮಳೆ ಸುರಿಯುತ್ತಿರುವ ಕಾರಣ ಈ ರಸ್ತೆ ಕೆಸರು ಗುಂಡಿಯಾಗಿ ಪರಿಣಮಿಸಿದೆ. ಇಲ್ಲಿಯವರೆಗೂ ರಸ್ತೆ ಉತ್ತಮವಾಗಿರುವ ಕಾರಣ ವೇಗವಾಗಿ ಬರುವ ವಾಹನಗಳು ಇಲ್ಲಿ ನಿಲ್ಲಿಸಲಾಗದೆ ಒಮ್ಮೆಲೆ ಗುಂಡಿಯಂತಿರುವ ರಸ್ತೆಯಲ್ಲಿ ವಾಹನವನ್ನು ಇಳಿಸಲು ಹೋಗಿ ಬಿದ್ದು ಮೂಳೆ ಮುರಿದುಕೊಳ್ಳುತ್ತಿದ್ದಾರೆ. ಇದು ಅಧಿಕಾರಿಗಳಿಗೆ ತಿಳಿಯುತ್ತಿಲ್ಲವೆ ಎಂದು ವಡ್ಡರಹಳ್ಳಿ ಮಾದೇವು ತಿಳಿಸುತ್ತಾರೆ.

ಇಲ್ಲಿ ಸುಮಾರು ನೂರು ಮೀಟರ್ ರಸ್ತೆಯನ್ನು ಅಗೆದು ಕಚ್ಛಾ ರಸ್ತೆಯನ್ನಾಗಿ ಮಾಡಲಾಗಿದೆ. ಗುಂಡಿ, ಕಲ್ಲುಗಳುಳ್ಳ ಈ ರಸ್ತೆಯಲ್ಲಿ ವಾಹನ ಚಾಲನೆ ಕಷ್ಟಸಾಧ್ಯವಾಗಿದೆ. ಉತ್ತಮ ರಸ್ತೆಗೂ ಈ ರಸ್ತೆಗೂ ಸುಮಾರು ಎರಡು ಅಡಿಗಳಷ್ಟು ಆಳವಿದ್ದು ವಾಹನ ಚಾಲಕರಿಗೆ ಇದು ನರಕ ಸದೃಶವಾಗಿದೆ ಎಂದು ಹೊನ್ನಿಗನಹಳ್ಳಿ ನಾಗರಾಜು ತಿಳಿಸುತ್ತಾರೆ.

ಇಲ್ಲಿ ಶಾಲೆ ಇರುವುದರಿಂದ ಈ ಕಚ್ಛಾರಸ್ತೆಯ ಧೂಳು ಶಾಲೆಗೆ ತುಂಬಿಕೊಳ್ಳುತ್ತಿದೆ. ಮಕ್ಕಳಿಗೆ ಇದು ಖಾಯಿಲೆಯ ಜಾಗವಾಗಿ ಪರಿಣಮಿಸಿದೆ. ಮಕ್ಕಳು ಪ್ರತಿದಿನ ಧೂಳಿನಿಂದ ಕಷ್ಟ ಅನುಭವಿಸುವಂತಾಗಿದೆ. ಶಾಲೆಗೆ ಬರುವಾಗ ಹಾಗೂ ಶಾಲೆ ಬಿಟ್ಟ ನಂತರವೂ ಮಕ್ಕಳು ಧೂಳನ್ನು ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಹುಚ್ಚೇಗೌಡ ತಿಳಿಸಿದ್ದಾರೆ.

ಹಾಗೆಯೆ ಕೋಡಂಬಹಳ್ಳಿ ಗ್ರಾಮದ ಒಳಗೂ ರಸ್ತೆ ಅಭಿವೃದ್ಧಿ ಮಾಡಿಲ್ಲ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ ಎಂದು ತಿಳಿಸುತ್ತಾರೆ. ರಸ್ತೆಯನ್ನು ಅಗೆಯುವಾಗ ಇಲ್ಲದ ಮೊಕದ್ದಮೆ ಅಭಿವೃದ್ಧಿ ಮಾಡುವಾಗ ಇದೆಯೆ ಎಂದು ಗ್ರಾಮದ ಚನ್ನಂಕೇಗೌಡ ಪ್ರಶ್ನಿಸುತ್ತಾರೆ.

ಅಧಿಕಾರಿಗಳು ಈ ಕೂಡಲೇ ಅಗೆದಿರುವ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು. ಇದಕ್ಕೆ ಡಾಂಬರು ಹಾಕಿ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT