ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಎಲ್ಲಂದರಲ್ಲಿ ವಾಹನ ನಿಲುಗಡೆ; ಸಂಚಾರ ಅಸ್ತವ್ಯಸ್ತ: ನಿತ್ಯ ವಾಹನ ದಟ್ಟಣೆ

ಪಟ್ಟಣದ ಕೆಲ ರಸ್ತೆಗಳಲ್ಲಿ ಬೃಹತ್‌ ವಾಹನ ಸಂಚಾರ ನಿರ್ಬಂಧಕ್ಕೆ ಒತ್ತಾಯ
ಸುಧೀಂದ್ರ ಸಿ.ಕೆ
Published : 2 ಸೆಪ್ಟೆಂಬರ್ 2024, 4:14 IST
Last Updated : 2 ಸೆಪ್ಟೆಂಬರ್ 2024, 4:14 IST
ಫಾಲೋ ಮಾಡಿ
Comments

ಮಾಗಡಿ: ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿದ ಕಾರಣ ಪಟ್ಟಣಕ್ಕೆ ಬರುವ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಪುರಡಸಭೆ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಗುರುತಿಸಬೇಕೆಂಬ ಸ್ಥಳೀಯರ ದಶಕದ ಬೇಡಿಕೆಗೆ ಇನ್ನೂ ಸ್ಪಂದನೆ ದೊರೆತಿಲ್ಲ. ಹೀಗಾಗಿ ಪಟ್ಟಣದ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ.

ಜನ ಸಂದಣಿಯಿರುವ ವೃತ್ತಗಳಲ್ಲಿ ವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಬಸ್ ನಿಲ್ದಾಣ, ವಾಣಿಜ್ಯ ಅಂಗಡಿ, ಹೋಟೆಲ್‌ಗಳಿವೆ. ಹೀಗಾಗಿ ಇಲ್ಲಿ ಎಲ್ಲಂದರಲ್ಲಿ ಸವಾರರು ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಮಾಗಡಿ–ಬೆಂಗಳೂರು ಮುಖ್ಯ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇಲ್ಲಿ ವಾಹನಗಳು ಸುಗಮವಾಗಿ ಸಂಚರಿಸಿದನ್ನು ಕಂಡಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಶಾಲಾ–ಕಾಲೇಜು ಬಿಡುವ ಸಮಯ ಮತ್ತು ಸಂಜೆ ವೇಳೆ ಹೆಚ್ಚಿನ ವಾಹನಗಳನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸುತ್ತಿರುವುದರಿಂದ ಬೆಂಗಳೂರು ನಗರದಂತೆ ವಾಹನ ದಟ್ಟಣೆ ಪಟ್ಟಣದಲ್ಲಿಯೂ ಉಂಟಾಗುತ್ತಿದ್ದು, ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೆಂಪೇಗೌಡ ವೃತ್ತ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕ್ ಇದೆ. ಬ್ಯಾಂಕ್‌ಗೆ ಬರುವ ಗ್ರಾಹಕರು ಸಿಕ್ಕ ‌‌ಜಾಗದಲ್ಲಿ ವಾಹನ ನಿಲ್ಲಿಸುತ್ತಾರೆ. ರಸ್ತೆಯ ಎರಡೂ ಬದಿಯಲ್ಲೂ ವಾಹನ ನಿಲುಗಡೆ ಮಾಡುವುದರಿಂದ ಬೃಹತ್‌ ವಾಹನ ಸಂಚರಿಸಲು ಆಗುತ್ತಿಲ್ಲ. ಇಕ್ಕೆಲ್ಲದಲ್ಲಿ ನಿಲ್ಲಿಸಿರುವ ವಾಹನ ತೆಗೆಯುವರೆಗೂ ಬೃಹತ್‌ ವಾಹನಗಳು ಕಾಯಬೇಕಾದ ದುಸ್ಥಿತಿ ಒಂದೆಡೆಯಾದರೆ, ಇದರ ಹಿಂದೆ ಸಾಲುಗಟ್ಟಿ ನಿಂತ ವಾಹನ ಸವಾರರ ಗೋಳು ಕೇಳುವವರಿಲ್ಲ.

ಎನ್ಇಎಸ್ ಮುಖ್ಯ ರಸ್ತೆಗೆ ಸಂಪರ್ಕಿಸುವ ವೃತದ ಬಳಿ ವಾಹನ ದಟ್ಟಣೆ ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿ ಒಂದು ಬದಿಯಲ್ಲಿ ತರಕಾರಿ ವ್ಯಾಪಾರ, ಮತ್ತೊಂದು ಬದಿಯಲ್ಲಿ ಬ್ಯಾಂಕ್‌ಗೆ ಬರುವ ಗ್ರಾಹಕರು ರಸ್ತೆ ಬದಿಯಲ್ಲೇ ದ್ವಿಚಕ್ರ ವಾಹನ ನಿಲ್ಲಿಸುತ್ತಿರುವುದರಿಂದ ಕಾರು ಸೇರಿದಂತೆ ದೊಡ್ಡ ವಾಹನಗಳು ಇಲ್ಲಿ ಸಂಚರಿಸುವುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಸ್ಥಳೀಯರು.

ಡೂಮ್ ಲೈಟ್ ವೃತ್ತದಿಂದ ಕೆಂಪೇಗೌಡ ವೃತ್ತ ಸಂಪರ್ಕಿಸುವ ಮಾರುಕಟ್ಟೆ ರಸ್ತೆಯಲ್ಲೂ ಇದೇ ಸಮಸ್ಯೆಯಾಗಿದೆ. ದೊಡ್ಡ ಗಾತ್ರದ ವಾಹನಗಳನ್ನು ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸದಂತೆ ಪುರಸಭೆ ನಿಷೇಧ ಹೇರಬೇಕು. ಇಲ್ಲದಿದ್ದರೆ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆ ತಪ್ಪಿದಲ್ಲ ಎನ್ನುವುದು ಇಲ್ಲಿನ ವರ್ತಕರ‌ ಮಾತು.

ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರೂ ಪುರಸಭೆಯಿಂದ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಜಾಗವನ್ನು ಗುರುತು ಮಾಡಿಲ್ಲ. ದೊಡ್ಡ ವಾಹನಗಳಿಗೆ ನಿಷೇಧ ಹೇರುವ ಕೆಲಸ ಮಾಡುತ್ತಿಲ್ಲ. ಇದರಿಂದ ಇಡೀ ಪಟ್ಟಣದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಜ್ಞಾವಂತರು ಆಕ್ರೋಶ ಹೊರ ಹಾಕಿದ್ದಾರೆ.

ನಿತ್ಯ ಶಾಲೆಗೆ ತಡ

ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನ ಸಮೀಪದ ರಾಜ್‌ಕುಮಾರ್ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳು ಹೆಚ್ಚಾಗಿವೆ. ಈ ರಸ್ತೆಯೂ ಕಿರಿದಾಗಿದೆ. ಬೆಳಗಿನ ಸಮಯದಲ್ಲಿ ಶಾಲಾ ವಾಹನಗಳು ಹೆಚ್ಚು ಸಂಚರಿಸುವೆ. ಈ ಸಮಯದಲ್ಲಿ ದಿನಸಿ ಅಂಗಡಿಗಳಿಗೆ ಬೆಂಗಳೂರಿನಿಂದ ಸರಕು ತರುವ ದೊಡ್ಡ ಲಾರಿಗಳನ್ನು ಅಂಗಡಿ ಮುಂಭಾಗ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಶಾಲಾ ವಾಹನ ಸಂಚರಿಸಲು ಆಗದೆ ವಾಹನ ದಟ್ಟಣೆ ಉಂಟಾಗುತ್ತಿದೆ. ಬೆಳಗಿನ ಸಮಯದಲ್ಲಿ ಆರ್‌ಆರ್ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಪುರಸಭೆ ಅವಕಾಶ ನೀಡಬಾರದು. ಮಧ್ಯಾಹ್ನದ ಸಮಯದಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕು. ಇಲ್ಲವಾದರೆ ಪ್ರತಿ ದಿನವೂ ಶಾಲೆಗಳಿಗೆ ಮಕ್ಕಳು ತಡವಾಗಿ ಹೋಗಬೇಕಾಗುತ್ತದೆ ಎನ್ನುತ್ತಾರೆ ಶಾಲಾ ವಾಹನ ಚಾಲಕರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗೆ ಪತ್ರ

ಜಿಲ್ಲಾಧಿಕಾರಿಗೆ ವಾಹನ ನಿಲುಗಡೆಗೆ ಜಾಗ ಗುರುತು ಮಾಡಿಕೊಡಲು ಪತ್ರ ಬರೆಯಲಾಗಿದೆ. ಆರ್‌ಆರ್‌ ರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದು ಬದಿಯಲ್ಲಿ ವಾಹನ ನಿಲುಗಡೆ ಮಾಡುವಂತೆ ಆದೇಶ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಪುರಸಭೆಯಿಂದ ಆದೇಶವಾದರೆ ಸಾರ್ವಜನಿಕರಿಗೆ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿ ಕ್ರಮ ಕೈಗೊಳ್ಳಬಹುದು. ಪುರಸಭೆಯಿಂದ ವಾಹನ ನಿಲುಗಡೆಗೆ ಜಾಗ ಗುರುತಿಸದ ಕಾರಣ ಸಾಕಷ್ಟು ಸಮಸ್ಯೆ ಆಗುತ್ತಿದೆ.

-ಗಿರಿರಾಜ್ ಪೊಲೀಸ್ ಇನ್ಸ್‌ಪೆಕ್ಟರ್‌

ಎಚ್ಚರಿಕೆ ನೀಡಿ ಈ ಹಿಂದೆ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ರಾಜಕುಮಾರ್ ರಸ್ತೆಯಲ್ಲಿ ಬೆಳಗಿನ ಸಮಯದಲ್ಲಿ ದೊಡ್ಡ ವಾಹನಗಳಿಗೆ ನಿಷೇಧ ಹೇರಬೇಕು. ಕಲ್ಯಾಗೇಟ್ ಸರ್ಕಲ್‌ನಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ ಮಾಲೀಕರಿಗೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡಬೇಕೆಂದು ತಿಳಿಸಲಾಗಿತ್ತು. ಈಗ ಕಲ್ಯಾಗೇಟ್ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೆ ಇರುವುದರಿಂದ ವಾಹನ ದಟ್ಟಣೆ ಸಮಸ್ಯೆ ಉಲ್ಭಣಿಸಿದೆ. -ಎಂ.ಎನ್.ಮಂಜುನಾಥ್ ಪುರಸಭೆ ಸದಸ್ಯ

ಸವಾರರದ್ದೆ ತಪ್ಪು; ಅಂಗಡಿ ಮತ್ತು ಹೋಟೆಕ್‌ಗೆ ಬರುವ ಗ್ರಾಹಕರು ಎಲ್ಲಂದರಲ್ಲಿ ಕಾರು ಮತ್ತು ಬೈಕ್ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಪುರಸಭೆಯವರು ವೃತ್ತಗಳಲ್ಲಿ ದಿನ ಬಿಟ್ಟು ದಿನ ಒಂದು ಬದಿಯಲ್ಲಿ ಮಾತ್ರ ವಾಹನ ನಿಲ್ಲಿಸುವಂತೆ ಸೂಚನೆ ನೀಡಬೇಕು. ಜತೆಗೆ ಆಡಳಿತವನ್ನು ದೂರಿದರೆ ಸಾಲದು. ಸವಾರರು ಅಡ್ಡದಿಡ್ಡಿಯಾಗಿ ವಾಹನ ನಿಲ್ಲಿಸದೆ ಸರಿಯಾದ ಕ್ರಮದಲ್ಲಿ ನಿಲ್ಲಿಸಬೇಕು.

- ಪವನ್ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT