ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | 'ಪೊಲೀಸರ ದುರ್ನಡತೆ: ಧೈರ್ಯದಿಂದ ದೂರು ಕೊಡಿ'

ಪೊಲೀಸ್ ದೂರುಗಳ ಪ್ರಾಧಿಕಾರದ ಕುರಿತು ಅರಿವು ಮೂಡಿಸಿ: ನ್ಯಾ. ಸುಧೀಂದ್ರ ರಾವ್ ಸಲಹೆ
Published 7 ಮೇ 2024, 6:53 IST
Last Updated 7 ಮೇ 2024, 6:53 IST
ಅಕ್ಷರ ಗಾತ್ರ

ರಾಮನಗರ: ‘ಸಾರ್ವಜನಿಕರ ಬಳಿ ಪೊಲೀಸರು ದುರ್ನತಡೆ ತೋರಿದರೆ ಹಾಗೂ ಕರ್ತವ್ಯಲೋಪ ಎಸಗಿದರೆ ಸಾರ್ವಜನಿಕರು ಪೊಲೀಸರ ವಿರುದ್ಧ ಧೈರ್ಯದಿಂದ ದೂರು ನೀಡಿ ನ್ಯಾಯ ಪಡೆಯಬಹುದು. ಅದಕ್ಕಾಗಿಯೇ ಪೊಲೀಸ್ ದೂರುಗಳ ಪ್ರಾಧಿಕಾರವಿದ್ದು ಯಾವುದೇ ಹಿಂಜರಿಕೆ ಇಲ್ಲದೆ ದೂರು ನೀಡಬೇಕು’ ಎಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರ ರಾವ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಾಧಿಕಾರ ಹಮ್ಮಿಕೊಂಡಿದ್ದ ಪರಾಮರ್ಶನ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಎಸ್‌ಪಿ ಹಂತದ ಪೊಲೀಸ್ ಅಧಿಕಾರಿಯಿಂದಿಡಿದು ತಳಮಟ್ಟದ ಕಾನ್‌ಸ್ಟೆಬಲ್‌ ದುರ್ವರ್ತನೆ ವಿರುದ್ಧ ಸಾರ್ವಜನಿಕರು ರಾಜ್ಯ ಅಥವಾ ಜಿಲ್ಲಾಮಟ್ಟದ ಪ್ರಾಧಿಕಾರಕ್ಕೆ ದೂರು ನೀಡಬಹುದು’ ಎಂದರು.

‘ನೊಂದ ಸಾರ್ವಜನಿಕರು ಪ್ರಾಧಿಕಾರದ ಅಧ್ಯಕ್ಷರಿಗೆ ನೇರವಾಗಿ ದೂರು ಕೊಡಬಹುದು. ಇಲ್ಲವಾದರೆ ಅಂಚೆ ಮೂಲಕವೂ ದೂರು ಸಲ್ಲಿಸಬಹುದು. ಪ್ರಾಧಿಕಾರವು ದೂರಿನ ಸತ್ಯಾಸತ್ಯತೆ ಪರಿಶೀಲಿಸಿ, ಅಧಿಕಾರಿ ಅಥವಾ ಸಿಬ್ಬಂದಿ ತಪ್ಪೆಸಗಿರುವುದು ಕಂಡುಬಂದರೆ ಕ್ರಮಕ್ಕೆ ಶಿಫಾರಸು ಮಾಡಲಿದೆ. ಮೂರು ತಿಂಗಳೊಳಗೆ ದೂರು ವಿಲೇವಾರಿಯಾಗಲಿದೆ’ ಎಂದು ತಿಳಿಸಿದರು.

‘ಕಳೆದ ಜುಲೈನಲ್ಲಿ ಪ್ರಾಧಿಕಾರದ ಅಧ್ಯಕ್ಷನಾಗಿ ನಾನು ಅಧಿಕಾರ ಸ್ವೀಕರಿಸಿದ್ದೇನೆ. ಪ್ರಾಧಿಕಾರದ ಕಾರ್ಯವೈಖರಿ, ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಮೊದಲಿಗೆ ರಾಮನಗರದಿಂದ ಪ್ರವಾಸ ಆರಂಭಿಸಿದ್ದು, ಮುಂದೆ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಲಿದ್ದೇನೆ’ ಎಂದು ಹೇಳಿದರು.

‘ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಆಗಲೇ ಪೊಲೀಸರು ಚನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಅದೇ ರೀತಿ ಸಾರ್ವಜನಿಕರಿಗೂ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ ಇರಬೇಕು. ಕರ್ತವ್ಯದ ಒತ್ತಡದಲ್ಲಿ ಪೊಲೀಸರಿಂದ ತಪ್ಪುಗಳಾಗಬಹುದು. ಅದನ್ನು ಪ್ರಶ್ನಿಸಲು ಒಂದು ಪ್ರಾಧಿಕಾರವಿದೆ ಎಂಬ ಅರಿವು ಜನರಲ್ಲಿರಬೇಕು. ಪೊಲೀಸರಿಗೂ ತಾವು ಪ್ರಶ್ನಾರ್ಹರು ಮತ್ತು ನಮ್ಮ ದುರ್ನಡತೆ ವಿರುದ್ಧ ಸಾರ್ವಜನಿಕರು ದೂರು ಕೊಡಲಿದ್ದಾರೆ ಎಂಬುದು ಗೊತ್ತಿದ್ದರೆ ದುರ್ನಡತೆ ಕ್ರಮೇಣ ತಗ್ಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ, ಸದಸ್ಯೆಯಾದ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪೊಲೀಸ್ ಮಹಾ ನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ, ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ರಾಮಚಂದ್ರ, ಡಿವೈಸ್ಪಿಗಳಾದ ದಿನಕರ ಶೆಟ್ಟಿ, ಕೆ.ಎಂ. ಪ್ರವೀಣ್‌ ಕುಮಾರ್, ಕೆ.ಸಿ. ಗಿರಿ, ಇನ್‌ಸ್ಪೆಕ್ಟರ್‌ಗಳು ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳು ಇದ್ದರು.

ಪ್ರಾಧಿಕಾರದ ಸಂಪರ್ಕ ಸಂಖ್ಯೆ: 080-27271101 ದೂರು ಸಲ್ಲಿಸಿದ ಮೂರು ತಿಂಗಳೊಳಗೆ ವಿಲೇವಾರಿ ಪ್ರಾಧಿಕಾರದ ಬಗ್ಗೆ ಜಾಗೃತಿಗೆ ಅಧ್ಯಕ್ಷರ ರಾಜ್ಯ ಪ್ರವಾಸ

ಪೊಲೀಸರು ದುರ್ನಡತೆ ತೋರಿದರೆ ಸರಿಯಾಗಿ ಸ್ಪಂದಿಸದಿದ್ದರೆ ಅವರ ವಿರುದ್ಧವೂ ದೂರು ಕೊಡುವುದಕ್ಕೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರಾಧಿಕಾರವಿದೆ ಎಂಬುದರ ಕುರಿತು ಹೆಚ್ಚಿನ ಜನಜಾಗೃತಿಯ ಅಗತ್ಯವಿದೆ

– ನ್ಯಾ. ಎನ್‌.ಕೆ. ಸುಧೀಂದ್ರರಾವ್ ಅಧ್ಯಕ್ಷ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ

‘ಮಹಿಳೆಯರಿಗೆ ಸಂಬಂಧಿಸಿದಂತೆ ಶೇ 40ರಷ್ಟು ದೂರು’ ‘ಪೊಲೀಸರ ದುರ್ನಡತೆ ಕುರಿತು ರಾಜ್ಯದಲ್ಲಿ ಕಳೆದ ಜುಲೈನಿಂದ ಇಲ್ಲಿಯವರೆಗೆ ಸುಮಾರು 600 ದೂರುಗಳು ಬಂದಿವೆ. ಈ ಪೈಕಿ ಶೇ 40ರಷ್ಟು ಮಹಿಳೆಯರಿಗೆ ಸಂಬಂಧಿಸಿದ್ದಾಗಿವೆ. ಎಲ್ಲವನ್ನೂ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ 38 ದೂರುಗಳು ಬಂದಿದ್ದು ಅದರಲ್ಲಿ 37 ದೂರುಗಳು ವಿಲೇವಾರಿಯಾಗಿವೆ. ರಾಜ್ಯಮಟ್ಟದಲ್ಲಿ 200 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ತೀವ್ರತರ ದುರ್ನಡತೆಯ ದೂರುಗಳು ಬಂದಿಲ್ಲ. ಸಾರ್ವಜನಿಕರಷ್ಟೇ ಅಲ್ಲದೆ ಸಿಬ್ಬಂದಿ ಸಹ ತಮ್ಮ ಮೇಲಧಿಕಾರಿಗಳ ದುರ್ವರ್ತನೆ ವಿರುದ್ಧ ದೂರು ನೀಡಲು ಅವಕಾಶವಿದೆ. ಆ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಪ್ರಾಧಿಕಾರ ನಿರ್ದೇಶನ ನೀಡಲಿದೆ. ಪ್ರಾಧಿಕಾರದಲ್ಲಿ ಖಾಲಿ ಇರುವ ಸದಸ್ಯ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾ. ಎನ್.ಕೆ. ಸುಧೀಂದ್ರ ರಾವ್ ಹೇಳಿದರು.

ಯಾವುದಕ್ಕೆಲ್ಲಾ ದೂರು ನೀಡಬಹುದು? – ಪೊಲೀಸ್ ವಶದಲ್ಲಿದ್ದ ಆರೋಪಿ ಮೃತಪಟ್ಟರೆ– ವಶದಲ್ಲಿರುವ ಆರೋಪಿ ಮೇಲೆ ಹಲ್ಲೆ ಮಾಡಿದರೆ– ಪೊಲೀಸ್ ವಶದಲ್ಲಿದ್ದಾಗ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದರೆ– ಕಾನೂನುಬಾಹಿರವಾಗಿ ಬಂಧಿಸಿದರೆ– ದೂರು ಕೊಡಲು ಠಾಣೆಗೆ ಬಂದಾಗ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT