ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂಜಾ ಕುಣಿತ: ಹಳ್ಳಿಯಿಂದ ದೆಹಲಿ ತಲುಪಿದ ಕಲಾವಿದ

Published 6 ಸೆಪ್ಟೆಂಬರ್ 2024, 4:40 IST
Last Updated 6 ಸೆಪ್ಟೆಂಬರ್ 2024, 4:40 IST
ಅಕ್ಷರ ಗಾತ್ರ

ಕನಕಪುರ: ಮನಸಿದ್ದರೆ ಯಾವ ಕ್ಷೇತ್ರದಲ್ಲಿಯಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಪೂಜಾ ಕುಣಿತದಂತಹ ದೇಸಿ ಕಲೆಯನ್ನು ತನ್ನ ತಾಂಡಾದಿಂದ ದೆಹಲಿಯವರೆಗೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಹನುಮಂತ.

ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಜವಾಡಿದೊಡ್ಡಿ ಗ್ರಾಮದ ಹನುಮಂತ ನಾಯ್ಕ ಪೂಜಾ ಕುಣಿತದಿಂದಲೇ ಗುರುತಿಸಿಕೊಂಡ ದೇಸಿ ಪ್ರತಿಭೆಯಾಗಿದ್ದಾರೆ.

ಮನೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ. ಹೀಗಾಗಿ, ಎಸ್‌ಎಸ್‌ಎಲ್‌ಸಿವರೆಗೆ ಮರಳೇಕವಿ ಮಠದಲ್ಲಿ ಉಳಿದುಕೊಂಡು ಶಿಕ್ಷಣ ಪೂರೈಸಿದರು. ಒಂದು ದಿನ ದೇವರ ಉತ್ಸವದಲ್ಲಿ ನಡೆದ ಮೆರವಣಿಗೆ ಕಾರ್ಯಕ್ರಮದಲ್ಲಿ ಪೂಜಾ ಕುಣಿತವನ್ನು ನೋಡಿ ಆಕರ್ಷಿತರಾದರು. ಹೆಚ್ಚಿನ ಶಿಕ್ಷಣ ಸಾಧ್ಯವಾಗದಿದ್ದರೆ ಏನಾಯಿತು, ಪೂಜಾ ಕುಣಿತವನ್ನು ಯಾಕೆ ತಮ್ಮ ಬದುಕಿನ ಮಾರ್ಗವನ್ನಾಗಿ ಆಯ್ಕೆ ಮಾಡಿಕೊಳ್ಳಬಾರದು ಎನ್ನುವ ಆಲೋಚನೆ ಸುಳಿಯಿತು. ಪೂಜಾ ಕುಣಿತಕ್ಕೆ ಹಳ್ಳಿ, ತಾಲ್ಲೂಕು, ಜಿಲ್ಲೆಗಳಲ್ಲಿ ಮಾತ್ರವಲ್ಲ, ಬೆಂಗಳೂರು, ದೆಹಲಿಯಂತಹ ಮಹಾನಗರಗಳಲ್ಲಿ, ದೇಶ ವಿದೇಶಗಳಲ್ಲಿಯೂ ಮನ್ನಣೆ ಇದೆ ಎನ್ನುವುದನ್ನು ಅರಿತರು. 

1996ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಪೂಜಾ ಕುಣಿತದ ಕಲೆಯನ್ನು ಪ್ರದರ್ಶಿಸುತ್ತಿದ್ದ ತೋಟಳ್ಳಿ ಶಿವಮಾದು ಅವರ ಶಿಷ್ಯನಾಗಿ ಪೂಜಾ ಕುಣಿತ ಕಲಿಯಲು ಪಣ ತೊಟ್ಟರು. ಒಮ್ಮೆ ಪ್ರದರ್ಶನ ನೀಡಲು ಪ್ರಾರಂಭಿಸಿದ ಹನುಮಂತ ಹಿಂದಿರುಗಿ ನೋಡಲೇ ಇಲ್ಲ. ತಾಲ್ಲೂಕು ಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟದವರೆಗೂ ಪೂಜಾ ಕುಣಿತದ ಪ್ರದರ್ಶನ ನೀಡಿ, ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ, ಅನಂತರದ ದಿನಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಉತ್ಸಾಹಿ ಯುವಕರಿಗೆ ಪೂಜಾ ಕುಣಿತದ ತರಬೇತಿ ನೀಡಿ, ತಂಡ ಕಟ್ಟಿಕೊಂಡು ರಾಜಧಾನಿ ದೆಹಲಿ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನ್, ಆಂಧ್ರಪ್ರದೇಶಗಳಲ್ಲಿ ಹಾಗೂ ಟಿಟಿಡಿ ದೇವಾಲಯದ ಬ್ರಹ್ಮರಥೋತ್ಸವದಲ್ಲಿ ಪ್ರದರ್ಶನ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ, ಮೈಸೂರು ದಸರಾ, ವಿಶ್ವ ಕನ್ನಡ ಸಮ್ಮೇಳನ, ಹಂಪಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಯುವಜನೋತ್ಸವ, ಯುವಜನಮೇಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. 2017ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪೂಜಾ ಕುಣಿತದ ಪ್ರದರ್ಶನ ನೀಡಿದ್ದಾರೆ. 2012-13 ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯ ಯುವ ಸಾಧಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಾಜಕೀಯದಲ್ಲಿಯೂ ಆಸಕ್ತಿ ಹೊಂದಿರುವ ಹನುಮಂತ ಶಿವನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಕಲಾವಿದ ಹನುಮಂತ ನಾಯ್ಕ್

ಕಲಾವಿದ ಹನುಮಂತ ನಾಯ್ಕ್

ಪೂಜಾ ಕುಣಿತದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಒಲವಿತ್ತು. ನಮ್ಮ ನಾಡಿನ ಸಂಸ್ಕೃತಿ ಮತ್ತು ದೇಸಿ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಮಹತ್ವಕಾಂಕ್ಷೆ ಇತ್ತು. ದೇಸಿ ಕಲೆಯ ಮೂಲಕವೇ ರಾಜ್ಯ ರಾಷ್ಟ್ರದವರೆಗೂ ಗುರುತಿಸಿಕೊಳ್ಳಬೇಕು ಎನ್ನುವುದು ಮನದಿಂಗಿತವಾಗಿತ್ತು. ಅದರಂತೆ ಹಟ ಬಿಡದೇ ಪೂಜಾ ಕುಣಿತ ಕಲಿತೆ. ಇಂತಹ ದೇಸೀ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಕಾರ ಮುಖ್ಯವಾಗಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಗ್ರಾಮದೇವತೆಗಳ ಹಬ್ಬ ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ತಿಂಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಕಾರ್ಯಕ್ರಮ ಇರುತ್ತವೆ. ಈ ಕಲೆ ನನಗೆ ಖುಷಿಯನ್ನೂ ನೀಡಿದೆ ತೃಪ್ತಿಯನ್ನೂ ತಂದು ಕೊಟ್ಟಿದೆ.
ಹನುಮಂತ ನಾಯ್ಕ್ ಪೂಜಾ ಕುಣಿತ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT