ಶನಿವಾರ, ಸೆಪ್ಟೆಂಬರ್ 25, 2021
30 °C

ರೇಷ್ಮೆಗೆ ಪೌಡರ್‌ ಸಿಂಪಡಣೆ ಸ್ಪ್ರೇಯರ್‌ ಆವಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ರೇಷ್ಮೆ ಹುಳುಗಳಿಗೆ ತಗಲುವ ರೋಗ ನಿಯಂತ್ರಿಸಲು ಬಳಕೆ ಮಾಡುವ ಸುಣ್ಣ, ಇತರೇ ಪೌಡರ್‌ ಸಿಂಪಡಣೆ ಮಾಡಲು ಬೊಮ್ಮಚನಹಳ್ಳಿಯ ಯುವ ರೈತ ಅನಿಲ್‌ ಹೊಸ ತಾಂತ್ರಿಕತೆ ಆವಿಷ್ಕರಿಸಿದ್ದು, ಅದರಿಂದ ರೈತರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಕನಕಪುರ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿಇಒ ಡಾ.ಚಲುವಚಾರಿ ತಿಳಿಸಿದರು.

ಇಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗ ಇರುವ ರೇಷ್ಮೆ ರೈತ ಉತ್ಪಾದಕ ಕಂಪನಿ ಕಚೇರಿಯಲ್ಲಿ ಶನಿವಾರ ಯುವ ರೈತ ಅನಿಲ್‌ ಕಂಡು ಹಿಡಿದಿರುವ ಸುಣ್ಣ, ಪೌಡರ್‌ ಸಿಂಪಡಣೆ ಮಾಡುವ ಸ್ಪ್ರೇಯರ್‌ನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಷ್ಮೆ ಬೆಳೆಗಾರರು ಪ್ರತಿ ಬೆಳೆಯಲ್ಲಿ ಕಡ್ಡಾಯವಾಗಿ ಸುಣ್ಣ, ಪೌಡರ್‌ಗಳನ್ನು ಹುಳುಗಳಿಗೆ ಸಿಂಪಡಣೆ ಮಾಡಬೇಕಿದೆ. ಈ ರೀತಿ ಮಾಡುವುದರಿಂದ ರೈತರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮುಂದೆ ಶ್ವಾಸಕೋಶದ ಸಮಸ್ಯೆ ಉಂಟಾಗಲಿದೆ. ಇದನ್ನು ಮನಗಂಡ ಅನಿಲ್‌ ತಮ್ಮಲ್ಲಿ ಲಭ್ಯವಿರುವ ವಸ್ತುಗಳಿಂದಲೇ ಪೌಡರ್‌ ಸ್ಪ್ರೇ ಮಾಡುವ ಸ್ಪ್ರೇಯರ್‌ ಅನ್ನು ಆವಿಷ್ಕರಿಸಿದ್ದಾರೆ ಎಂದರು.

ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಸ್ಪ್ರೇಯರ್‌ ಕಂಡು ಹಿಡಿದಿದ್ದು ಇದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಪ್ರಾಯೋಗಿಕವಾಗಿ ಈಗಾಗಲೇ ಅವರು ಪೌಡರ್‌ ಸಿಂಪಡಣೆ ಸ್ಪ್ರೇಯರ್‌ ಬಳಕೆ ಮಾಡಿದ್ದು ಅದರಿಂದ ಉತ್ತಮ ಫಲಿತಾಂಶ ಬಂದಿದೆ. ಸ್ಪ್ರೇಯರ್‌ನಲ್ಲಿ ಪೌಡರ್‌ ಸಮ ಪ್ರಮಾಣದಲ್ಲಿ ಸಿಂಪಡಣೆ ಆಗಲಿದೆ ಎಂದು ತಿಳಿಸಿದರು.

ಕನಕಪುರ ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ಮಾತನಾಡಿ, ಅನಿಲ್‌ ಅವರು ಹೊಸದಾಗಿ ಆವಿಷ್ಕಾರ ಮಾಡಿರುವ ಸ್ಪ್ರೇಯರ್‌ ತುಂಬಾ ಸರಳವಾಗಿದೆ. ಇದರ ಬೆಲೆಯು ಅತ್ಯಂತ ಕಡಿಮೆಯಿದೆ. ₹ 500 ರಿಂದ ₹ 600 ಆಗಲಿದೆ. ತಾಲ್ಲೂಕಿನಲ್ಲಿ ಅಗತ್ಯವಿರುವ ರೈತರಿಗೆ ಕಂಪನಿ ಮೂಲಕವೇ ಖರೀದಿ ಮಾಡಿಕೊಡಲಾಗುವುದು ಎಂದರು.

ರೈತ ಅನಿಲ್‌ ಮಾತನಾಡಿ, ‘ರೇಷ್ಮೆ ಬೆಳೆಗಾರರು ಸುಣ್ಣ, ಪೌಡರ್‌ ಸಿಂಪಡಣೆ ಮಾಡಲು ತುಂಬಾ ಪ್ರಯಾಸಪಡುತ್ತಿದ್ದರು. ಅದರಿಂದ ಅವರ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುತ್ತಿತ್ತು. ಸುಣ್ಣ ಸಿಂಪಡಣೆಗೆ ಸರಳ ವಿಧಾನ ಕಂಡು ಹಿಡಿಯಬೇಕೆಂದು ಪ್ರಯತ್ನಿಸಿ ಬ್ಯಾಟರಿಯಿಂದ ಆಟೊಮೆಟಿಕ್‌ ಹಾಗಿ ಸ್ಪ್ರೇ ಮಾಡುವ ಮತ್ತು ಸಮಾನವಾಗಿ ಪೌಡರ್‌ ಸಿಂಪಡಣೆ ಆಗುವ ರೀತಿಯಲ್ಲಿ ಈ ಯಂತ್ರ ತಯಾರಿಸಿದ್ದು, ಈಗಾಗಲೇ ಬಳಕೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಕಂಪನಿ ಉಪಾಧ್ಯಕ್ಷೆ ಮಮತಾ ಚಿಕ್ಕರಾಜು, ಖಜಾಂಚಿ ಕೆ. ಬಾಲು, ನಿರ್ದೇಶಕ ಸತೀಶ್‌ ಬಿ. ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು