ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಸಿ ಪ್ರತಿಭಟನೆಗೆ ಸಿದ್ಧತೆ

Last Updated 20 ಡಿಸೆಂಬರ್ 2019, 13:52 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಭಾನುವಾರ (ಡಿ.22) ಪಟ್ಟಣದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಮುಸ್ಲಿಂ ಸಮುದಾಯದ ಮುಖಂಡ ನಿಜಾಮ್ ಪೌಜ್ ದಾರ್ ತಿಳಿಸಿದರು.

ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಈ ಪ್ರತಿಭಟನೆಯಲ್ಲಿ ಎಲ್ಲ ಸಮುದಾಯದ ಜನ, ತಾಲ್ಲೂಕಿನ ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘಸಂಸ್ಥೆಗಳು ಭಾಗವಹಿಸಲಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಕೇಂದ್ರ ಸರ್ಕಾರವು ಈ ಮಸೂದೆಯನ್ನು ಜಾರಿಗೆ ತಂದು ದೇಶದ ಶಾಂತಿ ಕದಡುವಂತೆ ಮಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಈ ಮಸೂದೆಯ ಮೂಲಕ ದೇಶದ ಅಲ್ಪಸಂಖ್ಯಾತರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶದೆಲ್ಲೆಡೆ ಈ ಮಸೂದೆ ವಿರುದ್ಧ ಉಗ್ರ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಪೌರತ್ವದ ವಿಚಾರವನ್ನು ಮುಂದು ಮಾಡಿಕೊಂಡು ದೇಶದ ಜನರನ್ನು ಒಡೆಯುವ ಕೆಲಸಕ್ಕೆ ಮುಂದಾಗಿರುವ ಬಿಜೆಪಿಯ ಕುತಂತ್ರಕ್ಕೆ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರ ಈ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಜಬೀವುಲ್ಲಖಾನ್ ಘೋರಿ ಮಾತನಾಡಿ, ‘ಶುಕ್ರವಾರವೇ ಪ್ರತಿಭಟನೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿರುವ ಕಾರಣ ಭಾನುವಾರ ಪ್ರತಿಭಟನೆ ನಡೆಸಲಿದ್ದೇವೆ. ಈ ಶಾಂತಿಯುತ ಪ್ರತಿಭಟನೆಯಲ್ಲಿ ನಮ್ಮ ಸಮುದಾಯದ ಹಲವು ನಾಯಕರು, ಧರ್ಮಗುರುಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಅಂಜುಮಾನ್ ಮೆಹದವೀಯ ಸಮಿತಿ ಅಧ್ಯಕ್ಷ ಸಾದತ್ ಮೆಹದಿ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಮದ್ ಆಲಿ, ಮುಖಂಡರಾದ ಶಬೀರ್ ವುಲ್ಲಾ ಬೇಗ್, ಸೈಯ್ಯದ್ ಯಾಕೂಬ್, ಟೈಗರ್ ಮುಮ್ತಾಜ್, ಆಶಿಪ್ ಆಲಿಖಾನ್, ಮುಖಂಡ ಅಕ್ಕೂರು ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT