ಮಂಗಳವಾರ, ಸೆಪ್ಟೆಂಬರ್ 21, 2021
21 °C
‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಡಿ ಕಾರ್ಯಾಗಾರ

ಬಿಡದಿ: ಸ್ಪರ್ಧಾತ್ಮಕ ಪರೀಕ್ಷೆ; ಇರಲಿ ಸಿದ್ಧತೆ -ಸಿ.ಎಂ. ಲಿಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಕರ್ನಾಟಕವೂ ಒಳಗೊಂಡು ದಕ್ಷಿಣ ಭಾರತದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಉಳಿದಿರುವುದು ವಿಷಾದನೀಯ. ಗ್ರಾಮೀಣ ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜ್ಞಾನವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

ಜ್ಞಾನವಿಕಾಸ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳು ಯಾವುದೇ ಅವಕಾಶ ವಂಚಿತರಾಗಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಂಡು ಉತ್ತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು. ನಮ್ಮೆಲ್ಲ ಉಪನ್ಯಾಸಕರು ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಹೆಚ್ಚಿನ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯನ್ನೇ ಓದುತ್ತಾರೆ. ಈ ಎರಡೂ ಪತ್ರಿಕೆಗಳಲ್ಲಿನ ಸುದ್ದಿಗಳು ನೈಜತೆಯಿಂದ ಕೂಡಿದ್ದು, ಯಾವುದೇ ಉತ್ಪ್ರೇಕ್ಷೆ ಇರುವುದಿಲ್ಲ. ಜೊತೆಗೆ ‘ಸ್ಪರ್ಧಾ ವಾಣಿ’ಯಲ್ಲಿನ ಲೇಖನಗಳು ಕೆಎಎಸ್‌, ಐಎಎಸ್ ಮೊದಲಾದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಉತ್ತಮ ಮಾರ್ಗದರ್ಶನ ಕೈಪಿಡಿಗಳಾಗಿವೆ. ಮುಂದೆಯೂ ಪತ್ರಿಕೆಯು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಹೆಚ್ಚೆಚ್ಚು ಪ್ರಕಟಣೆಗಳನ್ನು ಹೊರತರಲಿ ಎಂದು ಅವರು ಆಶಿಸಿದರು.

ಜ್ಞಾನ ವಿಕಾಸ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಎಲ್. ಸತೀಶ್ ಚಂದ್ರ, ನಾಗರಾಜು, ಬಿ.ಎನ್. ಗಂಗಾಧರಯ್ಯ, ಖಚಾಂಚಿ ಹೊನ್ನಶೆಟ್ಟಿ, ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್‌ ವಿಭಾಗದ ಪ್ರಾಚಾರ್ಯ ಸತೀಶ್‌ಚಂದ್ರ, ಪದವಿ ವಿಭಾಗದ ಪ್ರಾಚಾರ್ಯೆ ಟಿ. ರೂಪಾ, ಪಿ.ಯು ವಿಭಾಗದ ಪ್ರಾಚಾರ್ಯ ಎನ್‌.ಎಸ್. ವೀರಭದ್ರಯ್ಯ, ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಮಾಲೀಕ ಶಶಿಕುಮಾರ್‌, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕರಾದ ಕೋಮಲಾ ಕಿರಣ್ ಕುಮಾರ್, ‘ಪ್ರಜಾವಾಣಿ’ ಪತ್ರಿಕೆಯ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ ಜೋಯಿಸ್‌, ಹಿರಿಯ ವ್ಯವಸ್ಥಾಪಕ ಟಿ.ಎಂ. ಬಸವರಾಜು, ಜಿಲ್ಲಾ ಪ್ರತಿನಿಧಿಗಳಾದ ಶಂಕರ್ ಹಿರೇಮಠ, ಮಹೇಶ್‌, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.