ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ್ದ ಖಾಸಗಿ ನರ್ಸಿಂಗ್‌ ಹೋಂ

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಕೈ ಬಿಡಲು ಆಗ್ರಹ
Last Updated 28 ಜುಲೈ 2018, 15:54 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆ ವಿರೋಧಿಸಿ ಜಿಲ್ಲೆಯ ಖಾಸಗಿ ವೈದ್ಯರು ಬೆಳಗ್ಗೆ 6 ರಿಂದ ಸಂಜೆ 9ರವರೆಗೆ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್‌ ಮಾಡಿದ್ದರು. ಆದರೆ, ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳಿಗೆ ಸೇವೆ ಒದಗಿಸಲಾಯಿತು. ಸಂಜೆ 6 ಗಂಟೆ ಬಳಿಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಒಪಿಡಿ ಸೇವೆ ದೊರೆಯಿತು.

ಖಾಸಗಿ ನರ್ಸಿಂಗ್‌ ಹೋಮ್‌ ಮತ್ತು ಆಸ್ಪತ್ರೆಗಳಲ್ಲಿ ಒಪಿಡಿ ಮುಚ್ಚುವುದಷ್ಟೇ ಅಲ್ಲದೆ ಕ್ಲಿನಿಕ್‌ಗಳು ಕೂಡ ತೆರೆದಿರಲಿಲ್ಲ.

ಹೆಚ್ಚು ರೋಗಿಗಳು: ಮುಷ್ಕರದ ಕಾರಣ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ವೈದ್ಯರು ಕಾರ್ಯನಿರ್ವಹಿಸಿದರು.

ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. ಹೊರ ರೋಗಿಗಳ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಿತು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿವೇಕ್ ದೊರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮನವಿ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಉಪವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಎನ್‌ಎಂಸಿ ವಿಧೇಯಕವನ್ನು ಕೂಡಲೇ ಕೈ ಬಿಡಬೇಕು. ಒಂದೊಮ್ಮೆ ಎನ್‌ಎಂಸಿ ವಿಧೇಯಕ ಅನುಮೋದನೆಗೊಂಡರೆ ಇನ್ನೂ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದ ಎನ್‌ಎಂಸಿ ವಿಧೇಯಕದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಸ್ವಾಯತ್ತೆ ಇರುವುದಿಲ್ಲ. ಈ ವಿಧೇಯಕ ಶ್ರೀಮಂತರ ಮಕ್ಕಳಿಗಷ್ಟೇ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ಆರೋಪಿಸಿದರು.

ಎನ್‌ಎಂಸಿ ಮೂಲಕ ವೈದ್ಯರು, ಆಸ್ಪತ್ರೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ಈ ವಿಧೇಯಕವನ್ನು ವಿರೋಧಿಸುತ್ತಿದೆ ಎಂದು ತಿಳಿಸಿದರು.

‘ರಾಷ್ಟ್ರೀಯ ವೈದ್ಯಕೀಯ ಆಯೋಗ’ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ‘ಧಿಕ್ಕಾರ್ ದಿವಸ್’ ಹೆಸರಿನಲ್ಲಿ ಪ್ರತಿಭಟನೆಗೆ ನಡೆಸುತ್ತಿದೆ. ಸಂಘದ ಸದಸ್ಯರಾಗಿರುವ ಸಾವಿರಾರು ವೈದ್ಯರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ. ಶ್ರೀಧರ್ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಡಾ. ವಾಣಿಶ್ರೀ, ಡಾ. ಗಿರಿಸ್ವಾಮಿ, ಡಾ. ಎಸ್.ಎನ್. ಮಧುಸೂದನ್, ಡಾ.ಶಿವಕುಮಾರ್, ಡಾ.ಸಿ. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT