ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ನಿರ್ವಹಣೆ ಇಲ್ಲದ ಅಧ್ವಾನವಾದ ಉದ್ಯಾನ

ಸ್ವಚ್ಛತೆಯ ಕೊರತೆ– ಬೆಳೆದ ನಿಂತ ಕಳೆ: ಸ್ಥಳೀಯರ ದೂರಿಗೆ ಸ್ಪಂದಿಸದ ನಗರಸಭೆ
Published 2 ಜೂನ್ 2023, 23:30 IST
Last Updated 2 ಜೂನ್ 2023, 23:30 IST
ಅಕ್ಷರ ಗಾತ್ರ

ರಾಮನಗರ: ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಉದ್ಯಾನವು ನಿರ್ವಹಣೆಯ ಕೊರತೆಯಿಂದಾಗಿ ಅಧ್ವಾನವಾಗಿದೆ. ಸ್ಥಳೀಯರ ವಾಯು ವಿಹಾರಕ್ಕೆ, ಮಕ್ಕಳ ಆಟಕ್ಕೆ ಹಾಗೂ ಯುವಜನರು ಸಮಯ ಕಳೆಯುವ ತಾಣದಲ್ಲಿ ಕಳೆ ಬೆಳೆದು ನಿಂತಿದೆ. ಸ್ವಚ್ಛತೆ ಮರೀಚಿಕೆಯಾಗಿದ್ದು ಪಾಳು ಬೀಳುವ ಸ್ಥಿತಿಗೆ ಉದ್ಯಾನ ತಲುಪಿದೆ.

ಒಂದನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಉದ್ಯಾನದ ಅಭಿವೃದ್ಧಿ ಕಾಮಗಾರಿಗೆ 2016ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ಉದ್ಯಾನವನ್ನು ಚನ್ನಾಗಿಯೇ ನಿರ್ವಹಣೆ ಮಾಡುತ್ತಿದ್ದ ನಗರಸಭೆ, ನಂತರ ನಿರ್ಲಕ್ಷ್ಯ ತೋರಿತು.

ಉದ್ಯಾನದ ಒಳಗೆ– ಹೊರಗೆ ಪಾರ್ಥೇನಿಯಂ ಸೇರಿದಂತೆ ವಿವಿಧ ರೀತಿಯ ಕಳೆಗಳು ಮಂಡಿಯೆತ್ತರಕ್ಕೆ ಬೆಳೆದಿವೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಕೆಲವರು ಆ ರಾಶಿಗೆ ಬೆಂಕಿ ಹಚ್ಚಿರುವುದರಿಂದ ಕಸ ಅರ್ಧದಷ್ಟು ಸುಟ್ಟು ಚೆಲ್ಲಾಪಿಲ್ಲಿಯಾಗಿದೆ. ನಡಿಗೆ ಪಥದಲ್ಲೂ ಕಸ ಮತ್ತು ಮಣ್ಣು ಹರಡಿಕೊಂಡಿದೆ.

ಹಾವಿನ ಕಾಟ: ‘ಗಿಡಗಂಟಿಗಳು ಬೆಳೆದಿರುವುದರಿಂದ ಉದ್ಯಾನದೊಳಗೆ ಹಾವುಗಳ ಕಾಟ ಶುರುವಾಗಿದೆ. ಸ್ಥಳೀಯರ ಕಣ್ಣಿಗೆ ಹಲವು ಸಲ ಹಾವುಗಳು ಕಾಣಿಸಿಕೊಂಡಿವೆ. ಕೆಲವರು ಉದ್ಯಾನಕ್ಕೆ ತಿಂಡಿ–ತಿನಿಸು ತಂದು ಬಿಟ್ಟು ಹೋಗುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ’ ಎಂದು ಸ್ಥಳೀಯ ನಿವಾಸಿ ಶಶಿ ದೂರಿದರು.

‘ಉದ್ಯಾನವು ಪುಂಡರು ಮತ್ತು ಪೋಕರಿಗಳ ಅಡ್ಡವಾಗಿದೆ. ಆಗಾಗ, ಯುವಕರ ಗುಂಪು ಇಲ್ಲಿಗೆ ಬಂದು ಮದ್ಯಪಾನ ಮತ್ತು ಧೂಮಪಾನ ಮಾಡುವುದುಂಟು. ಸ್ಥಳೀಯರು ಆ ಬಗ್ಗೆ ಪ್ರಶ್ನಿಸಿದರೆ, ಜಗಳಕ್ಕೆ ಬರುತ್ತಾರೆ. ಉದ್ಯಾನದ ನಿರ್ವಹಣೆ ಕೊರತೆಯೇ ಇದಕ್ಕೆಲ್ಲಾ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಳಾದ ಆಟದ ಉಪಕರಣ: ‘ತೆರೆದ ಜಿಮ್‌ ಹಾಗೂ ಕೆಲ ಉಪಕರಣಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ. ಆ ಪೈಕಿ, ಒಂದೆರಡರನ್ನು ಬಿಟ್ಟರೆ ಬಹುತೇಕ ಉಪಕರಣಗಳು ಹಾಳಾಗಿವೆ. ಸ್ಥಳದಲ್ಲಿ ಹುಲ್ಲು ಮತ್ತು ಕಳೆ ಬೆಳೆದಿರುವುದರಿಂದ ಮಕ್ಕಳನ್ನು ಆಟವಾಡಲು ಕಳಿಸಲು ಭಯವಾಗುತ್ತದೆ’ ಎಂದು ಸ್ಥಳೀಯರಾದ ಲಕ್ಷ್ಮಮ್ಮ ಹೇಳಿದರು.

‘ಉದ್ಯಾನದಲ್ಲಿರುವ ಆಳವಾದ ನೀರಿನ ತೊಟ್ಟಿಯ ಒಂದು ಭಾಗವನ್ನು ತೆರೆದುಕೊಂಡಿದೆ. ಏನಾದರೂ ಅನಾಹುತ ಸಂಭವಿಸುವುದಕ್ಕೆ ಮುಂಚೆ ತೊಟ್ಟಿಯನ್ನು ಸರಿಯಾಗಿ ಮುಚ್ಚಬೇಕು. ನಿತ್ಯ ಉದ್ಯಾನದಲ್ಲಿ ಕಸ ಗುಡಿಸಿ, ತ್ಯಾಜ್ಯವನ್ನು ಕಾಂಪೋಸ್ಟ್ ತೊಟ್ಟಿಗೆ ಹಾಕಬೇಕು. ಕಸದ ಬುಟ್ಟಿಗಳನ್ನು ಸುಸ್ಥಿತಿಯಲ್ಲಿಡಬೇಕು. ನಡಿಗೆ ಪಥವನ್ನು ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿದರು.

ಭದ್ರತಾ ಸಿಬ್ಬಂದಿ ನಿಯೋಜಿಸಬೇಕು: ‘ಉದ್ಯಾನ ಪ್ರವೇಶಕ್ಕೆ ನಿಗದಿತ ಸಮಯ ನಿಗದಿಪಡಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಮಾತ್ರ ತೆರೆದು, ಉಳಿದಂತೆ ಪ್ರವೇಶದ್ವಾರಕ್ಕೆ ಬೀಗ ಹಾಕಬೇಕು. ಪುಂಡರ ಹಾವಳಿ ತಪ್ಪಿಸಲು ಭದ್ರತಾ ಸಿಬ್ಬಂದಿಯೊಬ್ಬರನ್ನು ನಿಯೋಜಿಸಬೇಕು’ ಎಂದು ವಿದ್ಯಾರ್ಥಿ ಹರೀಶ್ ಒತ್ತಾಯಿಸಿದರು.

‘ನಗರಸಭೆಯವರಿಗೆ ಉದ್ಯಾನವನ್ನು ನಿತ್ಯ ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಆಗ ಮಾತ್ರ ಆಕರ್ಷಣೀಯವಾಗಿರುತ್ತದೆ. ಇಲ್ಲದಿದ್ದರೆ, ಉದ್ಯಾನ ಇದ್ದೂ ನಾಗರಿಕರ ಪ್ರಯೋಜನಕ್ಕೆ ಬಾರದಂತಾಗುತ್ತದೆ’ ಎಂದರು.

ಉದ್ಯಾನದ ಆವರಣದಲ್ಲಿ ಬೆಳೆದು ನಿಂತಿರುವ ಕಳೆ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಉದ್ಯಾನದ ಆವರಣದಲ್ಲಿ ಬೆಳೆದು ನಿಂತಿರುವ ಕಳೆ ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಉದ್ಯಾನದಲ್ಲಿದ್ದ ಮಕ್ಕಳ ಉಯ್ಯಾಲೆ ಹಾಳಾಗಿದೆ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಉದ್ಯಾನದಲ್ಲಿದ್ದ ಮಕ್ಕಳ ಉಯ್ಯಾಲೆ ಹಾಳಾಗಿದೆ ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಉದ್ಯಾನದೊಳಗೆ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದು
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಉದ್ಯಾನದೊಳಗೆ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದು ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ಉದ್ಯಾನದೊಳಗೆ ಬೆಳೆದು ನಿಂತಿರುವ ಕಳೆ ಪುಂಡರಿಂದ ಧೂಮಪಾನ, ಮದ್ಯಪಾನ ಸೂಕ್ತ ನಿರ್ವಹಣೆಗೆ ಸ್ಥಳೀಯರ ಆಗ್ರಹ

ಉದ್ಯಾನಗಳ ನಿರ್ವಹಣೆಗೆ ಪ್ರತ್ಯೇಕ ಕಾರ್ಮಿಕರು ಇಲ್ಲದಿರುವುದರಿಂದ ಪೌರ ಕಾರ್ಮಿಕರೇ ಅದನ್ನು ಮಾಡಬೇಕಿದೆ. ಉದ್ಯಾನ ನಿರ್ವಹಣೆ ಮಾಡುವಂತೆ ಕೂಡಲೇ ಸೂಚಿಸಲಾಗುವುದು – ರಂಗರಾಜು ನಗರಸಭೆ ಎಇಇ ರಾಮನಗರ

‘ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸುವೆ’ ‘ಉದ್ಯಾನ ನಿರ್ವಹಣೆ ಸರಿಯಾಗಿಲ್ಲ ಎಂದು ಹಿಂದೆಯೂ ದೂರುಗಳು ಬಂದಿದ್ದವು. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೆ. ಅವರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಸ್ಥಳೀಯರು ಯಾರೂ ಇರಲಿಲ್ಲವೆಂದು ವಾಪಸ್ ಬಂದಿದ್ದರು. ಸ್ಥಳೀಯರು ಮತ್ತೊಮ್ಮೆ ದೂರು ಕೊಟ್ಟರೆ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸುವೆ. ಉದ್ಯಾನದಲ್ಲಿರುವ ಅವ್ಯವಸ್ಥೆಯನ್ನ ಪರಿಶೀಲಿಸಿ ಅವರು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ’ ಎಂದು ವಾರ್ಡ್– 1 ನಗರಸಭೆ ಸದಸ್ಯೆ ಜಯಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT