ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಕಮಲದ ಮುನ್ನಡೆಗೆ ಕಳೆಗುಂದಿದ ಕಾಂಗ್ರೆಸ್

ಸೋಲಿನ ಸೂಚನೆ ಸಿಗುತ್ತಿದ್ದಂತೆ ಎಣಿಕೆ ಕೇಂದ್ರದಿಂದ ಹೊರಟ ‘ಕೈ’ ಕಾರ್ಯಕರ್ತರು
Published 5 ಜೂನ್ 2024, 7:05 IST
Last Updated 5 ಜೂನ್ 2024, 7:05 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಶುರುವಾಗಿ, ಮುಗಿಯುವವರೆಗೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಸತತವಾಗಿ ಮುನ್ನಡೆ ಕಾಯ್ದುಕೊಂಡೇ ಬಂದರು. ಲೀಡ್‌ ಮತಗಳಲ್ಲಿ ಒಂದೆರಡು ಸಲ ಮಾತ್ರ ಏಳೆಂಟು ಸಾವಿರ ಮತಗಳ ವ್ಯತ್ಯಾಸವಾಗಿದ್ದನ್ನು ಬಿಟ್ಟರೆ, ಮತಗಳಿಕೆಯ ಪ್ರಮಾಣ ಪ್ರತಿ ಸುತ್ತಿನಲ್ಲೂ ಏರುತ್ತಲೇ ಸಾಗಿತು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಒಮ್ಮೆಯೂ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗದಂತೆ, ಮಂಜುನಾಥ್ ಅವರು ನಾಗಾಲೋಟದಲ್ಲಿ ಮುನ್ನಡೆ ಸಾಧಿಸುತ್ತಾ ಹೋದರು. ಪ್ರತಿ ಸುತ್ತಿನಲ್ಲೂ ಅವರ ಮತಗಳ ಪ್ರಮಾಣ ಏರಿಕೆಯಾಗುತ್ತಿದ್ದಂತೆ, ಎಣಿಕೆ ಕೇಂದ್ರದ ಹೊರಗಡೆ ಜಮಾಯಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಎದ್ದು ಕಾಣುತ್ತಿತ್ತು.

ಕಾರ್ಯಕರ್ತರು ಕೇಸರಿ ಶಾಲಿನ ಜೊತೆಗೆ ಬಾವುಟವನ್ನು ಪ್ರದರ್ಶಿಸುತ್ತಾ ತಮ್ಮ ಅಭ್ಯರ್ಥಿಯ ಗೆಲುವಿಗೆ ಪ್ರಾರ್ಥಿಸುತ್ತಿದ್ದರು. ಪ್ರತಿ ಸುತ್ತಿನ ಲೀಡ್ ಮಾಹಿತಿ ಹೊರಬಿದ್ದಾಗಲೆಲ್ಲಾ ‘ಜೈ ಮಂಜುನಾಥ್’, ‘ಮಂಜುನಾಥ್‌ಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರಧಾನಿ ಮೋದಿ ಪರ ಘೋಷಣೆಗಳು ಸಹ ಅಲ್ಲಲ್ಲಿ ಮೊಳಗಿದವು.

‘ಕೈ’ ಕಾರ್ಯಕರ್ತರ ನಿರಾಶೆ: ಮಂಜುನಾಥ್ ಅವರ ಮತಗಳ ಮುನ್ನಡೆ 50 ಸಾವಿರದೊಳಗೆ ಇರುವವರೆಗೆ ಎಣಿಕೆ ಕೇಂದ್ರದೊಳಗೆ ಮತ್ತು ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೆಲುವಿನ ಉತ್ಸಾಹ ಕಾಣುತ್ತಿತ್ತು. ಮುಂದಿನ ಸುತ್ತಿನಲ್ಲಿ ಮಂಜುನಾಥ್ ಅವರನ್ನು ಸುರೇಶ್ ಹಿಂದಿಕ್ಕಲಿದ್ದಾರೆ ಎಂಬ ವಿಶ್ವಾಸದಲ್ಲಿ ಮುಂದಿನ ಸುತ್ತಿನ ಎಣಿಕೆಯ ಮಾಹಿತಿಗೆ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು.

ಮಂಜುನಾಥ್ ಅವರು 50 ಸಾವಿರ ದಾಟಿ, 1 ಲಕ್ಷ ಮತಗಳ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಮುಖದಲ್ಲಿದ್ದ ಉತ್ಸಾಹ ಕಳೆಗುಂದಿತು. ಇನ್ನು ಲೀಡ್ ಅಂತರ 1.50 ಲಕ್ಷ ದಾಟಿ ಸುರೇಶ್ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಒಳಗಡೆ ಮತ್ತು ಹೊರಗಡೆ ಇದ್ದ ಕಾರ್ಯಕರ್ತರು ನಿಧಾನವಾಗಿ ಸ್ಥಳದಿಂದ ಹೊರಡ ತೊಡಗಿದರು. ಮತಗಳ ಅಂತರ 2 ಲಕ್ಷ ದಾಟುವ ಹೊತ್ತಿಗೆ ಬಹುತೇಕ ಮುಖಂಡರು ಸ್ಥಳದಿಂದ ಜಾಗ ಖಾಲಿ ಮಾಡಿದ್ದರು. ಮತ್ತೊಂದೆಡೆ ಮೈತ್ರಿ ಕಾರ್ಯಕರ್ತರು ಗೆಲುವಿನ ಕೇಕೆ ಹಾಕುತ್ತಾ ಘೋಷಣೆ ಕೂಗತೊಡಗಿದರು.

ಗೆಲ್ಲುವುದು ಖಚಿತವಾಗುತ್ತಿದ್ದಂತೆ ಮಂಜುನಾಥ್ ಅವರು ಮತ ಎಣಿಕೆ ಕೇಂದ್ರಕ್ಕೆ ಪತ್ನಿ ಅನಸೂಯ ಅವರೊಂದಿಗೆ ಬಂದು, ಬೆಂಬಲಿಗರನ್ನು ಭೇಟಿ ಮಾಡಿ ಹೊರಟುರು. ಅಧಿಕೃತವಾಗಿ ಗೆದ್ದ ಬಳಿಕ ಮತ್ತೆ ಕೇಂದ್ರಕ್ಕೆ ಬಂದು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಂದ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಿದರು. ನಂತರ, ನಗರದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ಬಿಗಿ ಪೊಲೀಸ್ ಬಂದೋಬಸ್ತ್ ಬೆಂಗಳೂರು ಗ್ರಾಮಾಂತರವು ಸೂಕ್ಷ್ಮ ಲೋಕಸಭಾ ಕ್ಷೇತ್ರವಾಗಿದ್ದರಿಂದ ಮತ ಎಣಿಕೆ ಕೇಂದ್ರದ ಒಳಗಡೆ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರು ಎಣಿಕೆಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದರಿಂದ ಭದ್ರತೆ ಹೆಚ್ಚಿಸಲು ಕೋರಿದ್ದರು. ಹಾಗಾಗಿ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಪೊಲೀಸರು ಅರೆ ಸೇನಾಪಡೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸರ್ಪಗಾವಲು ಇತ್ತು. ಕೇಂದ್ರದಿಂದ ಅನತಿ ದೂರದಲ್ಲೇ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿದ್ದ ಪೊಲೀಸರು ಎಣಿಕೆ ಮುಗಿಯುವವರೆಗೆ ಕಾಲೇಜಿನ ಎದುರಿನ ರಸ್ತೆಯನ್ನು ಮುಚ್ಚಿದ್ದರು. ಪಕ್ಕದ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಿದ್ದರು. ಪ್ರವೇಶ ದ್ವಾರದಿಂದಿಡಿದು ಕೇಂದ್ರದ ಒಳಗಡೆ ಹೋಗುವವರೆಗೆ ಮೂರ್ನಾಲ್ಕು ಕಡೆ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದರು. ಎಲ್ಲಾ ಕಡೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಮೈತ್ರಿ ಕಾರ್ಯಕರ್ತರ ಸಂಭ್ರಮಾಚರಣೆ ಮಂಜುನಾಥ್ ಅವರ ಗೆಲುವು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದ ಹೊರಗಡೆ ಮೈತ್ರಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ನಗರದೊಳಗೆ ಕಾರ್ಯಕರ್ತರು ತಮ್ಮ ವಾಹನಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಬಾವುಟ ಕಟ್ಟಿಕೊಂಡು ಜಾಲಿ ರೈಡ್ ಮಾಡುತ್ತಾ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಡೊಳ್ಳು–ವಾದ್ಯಗಳೊಂದಿಗೆ ಅದ್ಧೂರಿ ಸಂಭ್ರಮಾಚರಣೆಗೆ ನಿರ್ಬಂಧ ಇದ್ದಿದ್ದರಿಂದ ಸಂಭ್ರಮವು ದೊಡ್ಡ ಮಟ್ಟದಲ್ಲೇನೂ ನಡೆಯಲಿಲ್ಲ. ನಗರದ ಕೆಲ ವೃತ್ತಗಳಲ್ಲಿ ಕಾರ್ಯಕರ್ತರು ಸರಳವಾಗಿ ಗೆಲುವಿನ ಸಂಭ್ರಮವನ್ನು ಆಚರಿಸಿದರು. ಮೈತ್ರಿ ಮುಖಂಡರಾದ ಗೌತಮ್ ಗೌಡ ಆನಂದಸ್ವಾಮಿ ಪಿಚ್ಚನಕೆರೆ ಜಗದೀಶ್ ಎಚ್.ಸಿ. ಜಯಮುತ್ತು ಎಸ್.ಆರ್. ನಾಗರಾಜು ಪದ್ಮನಾಭ್ ರುದ್ರದೇವರು ನಾಗೇಶ್ ಚಂದನ್ ಸುರೇಶ್ ಸಬ್ಬಕೆರೆ ಶಿವಲಿಂಗಯ್ಯ ಅಂಜನಾಪುರ ವಾಸು ಪ್ರವೀಣ್‍ಗೌಡ ದರ್ಶನ್ ರಾಜು ಕಾಳಯ್ಯ ಸಂಜಯ್ ಜಯಕುಮಾರ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT