ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸಂಕಷ್ಟಕ್ಕೆ ಸಿಲುಕಿದ ರೀಲರ್‌ಗಳು

ಸರ್ಕಾರ ನೆರವಿಗೆ ಧಾವಿಸದಿದ್ದರೆ ಗೂಡು ಖರೀದಿಯಿಂದ ಹಿಂದೆ ಸರಿಯುವ ಆತಂಕ
Last Updated 9 ಮೇ 2020, 9:38 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ಬೆಳೆಗಾರರಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೀಲರ್‌ಗಳು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗೂಡು ಖರೀದಿ ನಿಲ್ಲಿಸುವ ಸಾಧ್ಯತೆಯೂ ಇದೆ.

ರಾಜ್ಯದಲ್ಲಿ ಸುಮಾರು 7ಸಾವಿರ ಮಂದಿ ಅಧಿಕೃತ ರೇಷ್ಮೆ ಬಿಚ್ಚಣಿಕೆದಾರರು ಇದ್ದಾರೆ. ಇವರಿಂದ ಲಾಕ್‌ಡೌನ್ ಅವಧಿಯಲ್ಲಿ ಸುಮಾರು 700-800 ಟನ್ ರೇಷ್ಮೆ ನೂಲು ಉತ್ಪಾದನೆಯಾಗಿದ್ದು, ಇದು ಮಾರಾಟವಾಗದೇ ಹಾಗೇ ಉಳಿದಿದೆ. ಸಾಮಾನ್ಯ ಸಂದರ್ಭದಲ್ಲಿ ಉತ್ಪಾದನೆಯಾಗುವ ರೇಷ್ಮೆ ನೂಲಿನಲ್ಲಿ ಶೇ20ರಷ್ಟು ರಾಜ್ಯದಲ್ಲಿಯೇ ಬಳಕೆಯಾದರೆ, ಉಳಿದ ರೇಷ್ಮೆ ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ದೂರದ ಬನಾರಸ್, ವಾರಾಣಸಿಗೆ ಮಾರಾಟ
ವಾಗುತ್ತದೆ. ಅದರೆ, ಲಾಕ್‌ಡೌನ್ ಅವಧಿಯಲ್ಲಿ ನೂಲು ಮಾರಾಟವಾಗದೆ ಉಳಿದಿದ್ದು, ಹಣ ಇಲ್ಲದೆ ರೀಲರ್‌ಗಳು ಕೈಚೆಲ್ಲಿ ಕುಳಿತಿದ್ದಾರೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸುವಂತೆ ರೀಲರ್‌ಗಳು ಬೇಡಿಕೆ ಇಟ್ಟಿದ್ದರು, ಇವರ ಮನವಿಗೆ ಸ್ಪಂದಿಸಿದ ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಕೊಟ್ಟ ಕೇವಲ 650 ಮಂದಿಗೆ ತಲಾ ₹1 ಲಕ್ಷದಂತೆ ₹6.5 ಕೋಟಿ ಅಡಮಾನ ಸಾಲ ನೀಡಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಸುಮಾರು ₹800 ಕೋಟಿ ವ್ಯವಹಾರ ನಡೆಸುವ ಮಂದಿಗೆ ಇದು ಯಾವುದಕ್ಕೂ ಸಾಲದಂತೆ ಆಗಿದೆ.

ನೂಲನ್ನು ಒತ್ತೆ ಇಟ್ಟುಕೊಂಡು ಒತ್ತೆ ಸಾಲ ನೀಡಬೇಕು. ಇಲ್ಲವೇ ಹೊರ ರಾಜ್ಯಗಳಿಗೆ ತೆರಳಿ ನೂಲು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ರೀಲರ್‌ಗಳು ಸರ್ಕಾರದ ಮುಂದೆ ಇಟ್ಟಿದ್ದರು. ಇದ್ದ ಹಣದಲ್ಲಿ ಇಲ್ಲಿಯವರೆಗೂ ಗೂಡು ಖರೀದಿ ಮಾಡಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದ ರೀಲರ್‌ಗಳು ಇದೀಗ ಕೈ ಚೆಲ್ಲುವ ಹಂತಕ್ಕೆ ಬಂದಿದ್ದಾರೆ. ಗೂಡೂ ಖರೀದಿ, ನೂಲು ಬಿಚ್ಚಣಿಕೆ ಮಾಡುವ ಕಾರ್ಮಿಕರಿಗೂ ಕೂಲಿ ಪಾವತಿ ಮಾಡಲು ಹಣ ಇಲ್ಲದ ಹಂತಕ್ಕೆ ಬಂತು ತಲುಪಿದ್ದಾರೆ.

ಒಂದು ವೇಳೆ ರೀಲರ್‌ಗಳು ಗೂಡು ಖರೀದಿ ಬಂದ್ ಮಾಡಿದರೆ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ಈ ಭಾಗದ ಲಕ್ಷಾಂತರ ಮಂದಿ ರೈತರು ಬೆಳೆದ ಗೂಡು ಬೀದಿಗೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT