ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸಿ ಕಾಲ್ನಡಿಗೆ ಜಾಥಾ

ಮೈಸೂರಿನಿಂದ ಬೆಂಗಳೂರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಜಾಥಾ
Last Updated 29 ಸೆಪ್ಟೆಂಬರ್ 2018, 13:25 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಕ್ಟೋಬರ್ 2 ರಂದು ಅನಿರ್ದಿಷ್ಟಾವದಿ ಧರಣಿ ನಡೆಸಲು ಮೈಸೂರಿನಿಂದ ಹೊರಟಿರುವ ಮಾದಿಗ ಸಂಘಟನೆಗಳ ಒಕ್ಕೂಟದ ಬೃಹತ್ ಕಾಲ್ನಡಿಗೆ ಜಾಥಾವನ್ನು ಇಲ್ಲಿನ ಎಪಿಎಂಸಿ ಬಳಿ ಮಾದಿಗ ಸಮುದಾಯದ ಮುಖಂಡರು ಶನಿವಾರ ಆತ್ಮೀಯವಾಗಿ ಸ್ವಾಗತಿಸಿ ಬೀಳ್ಕೊಟ್ಟರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಈ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.

ರಾಜ್ಯದಲ್ಲಿ ಸುಮಾರು 1.8 ಕೋಟಿ ಜನಸಂಖ್ಯೆಯನ್ನು ಸಮುದಾಯ ಹೊಂದಿದೆ. ದೇಶದ ಮೂಲ ನಿವಾಸಿಗಳಾದ ಅಸ್ಪೃಶ್ಯ ವರ್ಗಗಳಿಗೆ ಸೇರಿದ ಮಾದಿಗ ಮತ್ತು ಉಪ ಜಾತಿಗಳಿಗೆ ಇಂದೂ ಸ್ವಾತಂತ್ರ್ಯ ದೊರಕದಿರುವುದು ದುರದೃಷ್ಟಕರ ಎಂದು ಒಕ್ಕೂಟದ ಡಾ.ಆನಂದಕುಮಾರ್ ತಿಳಿಸಿದರು.

ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಈ ವರ್ಗಗಳು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ಮಾಡುವ ದುಸ್ಥಿತಿ ಮುಂದುವರಿದಿದೆ. ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಿರುವ ಸಮುದಾಯದವರು ಸಮಾಜದ ಮುಖ್ಯವಾಹಿನಿಯಿಂದ ಬಹುದೂರ ಉಳಿದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರಗಳು ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರವು ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಅದನ್ನು ವ್ಯವಸ್ಥಿತವಾಗಿ ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ವರದಿಯಲ್ಲಿ ಒಳ ಮೀಸಲಾತಿಗೆ ಅನುಕೂಲವಾಗುವ ವಿಚಾರಗಳಿದ್ದು ಆ ವರದಿ ಜಾರಿಯಾದರೆ ಜನಾಂಗಕ್ಕೆ ಅನುಕೂಲವಾಗಲಿದೆ ಎಂದರು.

ಒಕ್ಕೂಟದ ನಂಜುಂಡ ಮೌರ್ಯ ಮಾತನಾಡಿ, ‘ಅನಾದಿ ಕಾಲದಿಂದಲೂ ನಮ್ಮ ಸಮುದಾಯದ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳು ಸಮುದಾಯಕ್ಕೆ ವ್ಯವಸ್ಥಿತ ಸೌಲಭ್ಯಗಳನ್ನು ನೀಡುತ್ತಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದಿದ್ದರೂ ಮಾದಿಗ ಸಮುದಾಯದ ಮೇಲೆ ನಡೆಯುತ್ತಿರುವ ಶೋಷಣೆಗಳು ನಿಂತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಾಲ ಮನ್ನಾ ಮಾಡಿದ ಹಾಗೆ ದಲಿತರ ವಿವಿಧ ಸಾಲ ಮನ್ನಾ ಮಾಡಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ರುದ್ರಭೂಮಿ ಒದಗಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪಡೆದಿರುವ ಸಾಲ ಮನ್ನಾ ಮಾಡಿ ನೇರ ಸಾಲ ಕೊಡಿಸಬೇಕು ಆಗ್ರಹಿಸಿದರು.

ಮುಖಂಡರಾದ ಮರಡಿಪುರ ರವಿಕುಮಾರ್, ಬೈರಾಪುರ ಮಂಜು, ವೆಂಕಟೇಶ್, ಪ್ರಸನ್ನ ಚಕ್ರವರ್ತಿ, ಶ್ರೀನಿವಾಸ್, ಶಶಿಧರ್, ರಾಮಕೃಷ್ಣಯ್ಯ, ತಿಮ್ಮರಾಜ್, ಸತೀಶ್, ವಿಜಯ್‌ಕುಮಾರ್. ಆರ್. ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT