ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳವಾಡಿ ಟಿಎಪಿಸಿಎಂಎಸ್ ಚಿನ್ನ ನಾಪತ್ತೆ ಪ್ರಕರಣ ಇತ್ಯರ್ಥ

ಟಿಎಪಿಸಿಎಂಸ್‌ ಮರಳವಾಡಿ ಶಾಖೆ ಚಿನ್ನ ನಾಪತ್ತೆ ಪ್ರಕರಣ ಇತ್ಯರ್ಥ
Last Updated 19 ಏಪ್ರಿಲ್ 2022, 20:08 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ಟಿಎಪಿಸಿಎಂಎಸ್‍ನ ಮರಳವಾಡಿ ಶಾಖೆಯಲ್ಲಿ ರೈತರು ಒತ್ತೆ ಇಟ್ಟ ಚಿನ್ನ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬರೋಬ್ಬರಿ ₹ 3.37 ಕೋಟಿ ಮೌಲ್ಯದ 7 ಕೆ.ಜಿ. 113 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

‘ಟಿಎಪಿಸಿಎಂಎಸ್ ಮರಳವಾಡಿ ಶಾಖೆಯಲ್ಲಿ ರೈತರು ಅಡವಿಟ್ಟಿದ್ದ ಚಿನ್ನ ನಾಪತ್ತೆ ಆಗಿರುವ ಕುರಿತು ಅಲ್ಲಿನ ವ್ಯವಸ್ಥಾಪಕ ನದೀಂ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಅಲ್ಲಿನ ಸಿಬ್ಬಂದಿ ಗೋವಿಂದಪ್ಪ
ಅವರನ್ನು ಬಂಧಿಸಿ
ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಯು ಈ ಚಿನ್ನವನ್ನು 12 ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ
ಒತ್ತೆ ಇಟ್ಟಿದ್ದು, ಚಿನ್ನದ ಜೊತೆಗೆ ಮನೆಯಲ್ಲಿಟ್ಟದ್ದ ₹8.27 ಲಕ್ಷ ನಗದು ಸಹ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ
ನೀಡಿದರು.

‘ಆರೋಪಿ ಗೋವಿಂದಪ್ಪ 2018ರಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಆತ ರೈಸ್ ಫುಲ್ಲಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ ₹ 1.30 ಕೋಟಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದ. ರೈಸ್ ಫುಲ್ಲಿಂಗ್ ಆಸೆಗೆ ಬಿದ್ದು, ಅಡವಿಟ್ಟ ಚಿನ್ನಾಭರಣಗಳಿಂದ ಬಂದ ಹಣವನ್ನು ಕೊಟ್ಟಿದ್ದು, ಅವರು ಸಹ ಕೈಕೊಟ್ಟು ಪರಾರಿ ಆಗಿದ್ದರು. ಅಲ್ಲದೆ ಬ್ಯಾಂಕ್‍ಗೆ ಇಟ್ಟ ಒಡವೆಗಳನ್ನು ಬಡ್ಡಿ ಕಟ್ಟಲು ಮತ್ತೊಂದು ಒಡವೆಯನ್ನು ಅಡಮಾನವಿಡುವ ಚಾಳಿ ಬೆಳೆಸಿಕೊಂಡಿದ್ದ’ ಎಂದು
ವಿವರಿಸಿದರು.

ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಇಡಲಾಗಿದ್ದ ಒಡವೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ, ಕಳವಾದ ಇಲ್ಲವೇ ಅಕ್ರಮವಾಗಿ ಅಡಮಾನವಿಡುವ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿಲ್ಲ. ಇಂತಹ ಘಟನೆಗಳು ಮರುಕಳುಹಿಸಿದಂತೆ ಪ್ರಕರಣದ ಮಾಹಿತಿಯನ್ನು ಆರ್‌ಬಿಐ ಜೊತೆ ಹಂಚಿಕೊಳ್ಳಲಾಗುವುದು. ಟಿಎಪಿಸಿಎಂಎಸ್‍ನಂತಹ ಸಂಘ, ಸಂಸ್ಥೆಗಳು ಸಹ ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಕೋರಿದರು.

ಅಂತಿಮ ಹಂತಕ್ಕೆ ತನಿಖೆ: ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಡೆದ ವಂಚನೆ ಪ್ರಕರಣದ ತನಿಖೆಯು ಚಾರ್ಜ್‌ಶೀಟ್ ಹಂತಕ್ಕೆ ಬಂದಿದೆ ಎಂದು ಸಂತೋಷ್ ಬಾಬು ಮಾಹಿತಿ ನೀಡಿದರು.

2021ರ ಮಾರ್ಚ್ 23ರಂದು ಮಾರುಕಟ್ಟೆ ಅಧಿಕಾರಿ ಕೆ.ಟಿ. ವೆಂಕಟೇಶ್ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಿಡದಿ ಸಿಪಿಐ ತನಿಖೆ ಕೈಗೊಂಡಿದ್ದು, ₹1.21 ಕೋಟಿಯನ್ನು ಮಾರುಕಟ್ಟೆಯ ಆಗಿನ ಉಪ ನಿರ್ದೇಶಕ ಮುನ್ಶಿಬಸಯ್ಯ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ರೈತರಿಗೆ ಸಿಗಬೇಕಾದ ಹಣವನ್ನು ಸರ್ಕಾರ ನೀಡಿದೆ
ಎಂದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಕೆ.ಎನ್. ರಮೇಶ್, ಕನಕಪುರ ಸಿಪಿಐ ಕೃಷ್ಣ, ಎಸ್‍ಐ ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT