ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಸಾಂಸ್ಕೃತಿಕ ಪ್ರಭಾವ ಅಗಾಧ: ಎಂ.ಎಸ್. ಆಶಾದೇವಿ

Published 29 ಮಾರ್ಚ್ 2024, 6:28 IST
Last Updated 29 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ರಾಮನಗರ: ‘ಬಸವಣ್ಣನವರ ನಂತರ ಕರ್ನಾಟಕದ ಸಾಂಸ್ಕೃತಿಕ ಪ್ರಭಾವಶಾಲಿ ವ್ಯಕ್ತಿತ್ವದಲ್ಲಿ ಕುವೆಂಪು ಮೊದಲನೇ ಸ್ಥಾನ ಅಲಂಕರಿಸಿದರೆ, ಪಿ. ಲಂಕೇಶ್ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಸಾಮಾಜಿಕ ಪಿಡುಗುಗಳನ್ನು ಕಟುವಾಗಿ ವಿರೋಧಿಸಿ, ಸಾಮಾಜಿಕ ಸಾಂಸ್ಕೃತಿಕ ಸ್ವಾವಲಂಬಿಗಳಾಗಬೇಕು ಎಂದು ಕುವೆಂಪು ಸಾರಿದರು’ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

ನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗವು ವಿಶ್ವಮಾನವ ದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ‘ಕುವೆಂಪು ಬರಹಗಳು: ಸಂಸ್ಕೃತಿ ಮತ್ತು ವೈಚಾರಿಕತೆ’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಆಡಂಬರ ಹಾಗೂ ಅರ್ಥವಿಲ್ಲದ ಆಚರಣೆಗಳ ವಿವಾಹಕ್ಕೆ ಪ್ರತಿಯಾಗಿ ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ದತಿಯನ್ನು ಕುವೆಂಪು ಪ್ರತಿಪಾದಿಸಿದರು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಶ್ವಮಾನವರಾಗಿ ಎಂದು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದರು. ಕನ್ನಡ ಸಾಹಿತ್ಯಕ್ಕೆ ಕುವೆಂಪು ಕೊಡುಗೆ ಸಾಕಷ್ಟಿದ್ದು, ಸಾಹಿತ್ಯದ ದಿಕ್ಕನ್ನು ಬದಲಾಯಿಸಿದೆ’ ಎಂದರು.

‘ದೇಶದಲ್ಲಿ ಇಂಗ್ಲಿಷ್‌ಗೆ ಸಿಗುವ ಪ್ರಾಧಾನ್ಯತೆ ಪ್ರಾದೇಶಿಕ ಭಾಷೆಗಳಿಗೆ ಅದರಲ್ಲೂ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಇಂಗ್ಲಿಷ್ ಅನ್ನು ಪ್ರಪಂಚದ ಜ್ಞಾನ ತಿಳಿಯಲು ಒಂದು ಭಾಷೆಯಾಗಿ ನೋಡಬೇಕೇ ಹೊರತು ಅದೇ ಪ್ರಧಾನವಾಗಬಾರದು ಎಂದಿದ್ದರು. ದೇಶದಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೂರರ ಸ್ಥಾನವನ್ನು ಕುವೆಂಪು ಮಾತ್ರ ತುಂಬಬಲ್ಲವರು’ ಎಂದು ಹೇಳಿದರು.

ಅಧ್ಯಕ್ಷತೆ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಡೊಮಿನಿಕ್ ಡಿ., ‘70ರ ದಶಕದಲ್ಲಾದ ಸಾಹಿತ್ಯ ಮತ್ತು ಸಾಮಾಜಿಕ ಪಲ್ಲಟಗಳಲ್ಲಿ ಬಂದ ಅತ್ಯುತ್ತಮ ಲೇಖಕರಲ್ಲಿ ಕುವೆಂಪು ಮೊದಲಿಗರು. ಸಾಮಾಜಿಕ ಚಳುವಳಿಗಳು, ದಲಿತ ಚಳವಳಿ ಹಾಗೂ ರೈತ ಚಳವಳಿ ಸಹ ಅದೇ ಕಾಲಘಟ್ಟದಲ್ಲಿ ಹುಟ್ಟಿದವು’ ಎಂದರು.

‘ತಮ್ಮ ಕೃತಿಗಳ ಮೂಲಕ ಅನೇಕ ಕ್ರಾಂತಿಗಳಿಗೆ ಕುವೆಂಪು ಪ್ರೇರಣೆ ನೀಡಿದರು. ಅದರಲ್ಲಿ ಮುಖ್ಯವಾದದು ‘ವಿಚಾರ ಕ್ರಾಂತಿಗೆ ಆಹ್ವಾನ’ ಕೃತಿ. ಅದರ ಮೂಲಕ ಜನರಲ್ಲಿ ವೈಜ್ಞಾನಿಕ ಕ್ರಾಂತಿಯ ಕಿಡಿ ಹಚ್ಚಿದ ಕುವೆಂಪು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತಾರೆ. ತಂತ್ರಜ್ಞಾನವೆಂಬುದು ಪುಕ್ಕಟೆಯಾಗಿ ಎಲ್ಲರಿಗೂ ದೊರೆಯಬೇಕು ಎಂದು ಹೇಳಿದವರಲ್ಲಿ ಕುವೆಂಪು ಮೊದಲಿಗರು’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಡಾ. ಚಲಪತಿ ಆರ್, ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರಾಜು ಗುಂಡಾಪುರ ಹಾಗೂ ಇತರರು ಇದ್ದರು.

ರಾಷ್ಟ್ರಕವಿ ಕುವೆಂಪು ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯದಲ್ಲಿ ಶೂದ್ರಾತಿಶೂದ್ರರ ಪ್ರಾತಿನಿಧ್ಯವನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಿದರು
– ಡಾ. ಎಚ್‌.ಡಿ. ಉಮಾಶಂಕರ್ ಸಹ ಪ್ರಾಧ್ಯಾಪಕ ರಾಮನಗರ
‘ಜಾತಿ ಪದ್ಧತಿಗೆ ತೀಕ್ಷ್ಮ ವಿರೋಧ’
‘ಶೂದ್ರ ತಪಸ್ವಿ ನಾಟಕದ ಮೂಲಕ ಕುವೆಂಪು ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರೋಧದ ನಡುವೆಯೂ ಹಿಂದೆ ನಡೆದ ಪಾರಂಪರಿಕ ತಪ್ಪುಗಳನ್ನು ಇಂದು ನಾವು ಸರಿಪಡಿಸಬೇಕಿದೆ ಎಂದು ಜಾತಿ ಪದ್ದತಿಯನ್ನು ತೀಕ್ಷ್ಣವಾಗಿ ವಿರೋಧಿಸಿದರು. ಕುವೆಂಪು ಸಾಮಾಜಿಕವಾಗಿ ಬದ್ದತೆ ಹೊಂದಿದ್ದ ವೈಜ್ಞಾನಿಕ ಮನೋಭಾವನೆ ಉಳ್ಳವರಾಗಿದ್ದರು ಎಂಬುದಕ್ಕೆ ಅವರ ಕೃತಿಗಳೇ ನಿದರ್ಶನ’ ಎಂದು ಆಶಾದೇವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT