ಚನ್ನಪಟ್ಟಣ: ‘ಸಮಾಜದ ಹಿತಕ್ಕಾಗಿ ದುಡಿಯುವ ವರ್ಗವನ್ನು ಗುರುತಿಸಿ ಸನ್ಮಾನಿಸಿದಾಗ ಮಾತ್ರ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ಪೌರಾಯುಕ್ತ ಸಿ.ಪುಟ್ಟಸ್ವಾಮಿ ಹೇಳಿದರು.
ನಗರದ ಶತಮಾನೋತ್ಸವ ಭವನದಲ್ಲಿ ಗುರುವಾರ ಸಾಂತ್ವನ ಚಾರಿಟಬಲ್ ಟ್ರಸ್ಟ್‌ನಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳಾ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡುವ ‘ನಾರಿ ಸನ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಮಾಜದ ಕಟ್ಟಕಡೆಯ ವ್ಯವಸ್ಥೆಯಲ್ಲಿ ಗುರುತಿಸಲ್ಪಡುವ ಪೌರಕಾರ್ಮಿಕರಿಗೆ ಹಾಗೂ ಗ್ರಾಮೀಣ ಭಾಗದ ಜನರ ಆರೋಗ್ಯಸೇವೆ ಮಾಡುವ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಹಬ್ಬದ ಸಮಯದಲ್ಲಿ ಬಾಗಿನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮ ಸಮಾಜಕ್ಕೆ ಒಂದು ಉತ್ತಮ ಸಂದೇಶವಾಗಿದ್ದು, ಇಂತಹ ಇನ್ನಷ್ಟು ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು’ ಎಂದರು.
ಟ್ರಸ್ಟ್ ಸಂಸ್ಥಾಪಕಿ ಪವಿತ್ರ ಆರ್.ಪ್ರಭಾಕರ್ ರೆಡ್ಡಿ ಮಾತನಾಡಿ, ‘ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಸಮಾಜದ ಎರಡು ಪ್ರಮುಖ ಆಧಾರಸ್ಥಂಭಗಳು. ಪರಿಸರ ಸ್ವಚ್ಛತೆ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಅಪಾರವಾಗಿದೆ. ಇವರೇ ನಮ್ಮ ಸಮಾಜ ಸೇವಕರು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇವರಿಗೆ ಬಾಗಿನ ನೀಡುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ’ ತಿಳಿಸಿದರು.
ನಗರದ ವೃತ್ತ ನಿರೀಕ್ಷಕಿ ಶೋಭಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಮಹಿಳಾ ಮುಖಂಡರಾದ ಜಯಶೀಲ, ರೇಣುಕಮ್ಮ, ಕಲಾವಿದೆ ಲಕ್ಷ್ಮಿ ಶ್ರೀನಿವಾಸ್, ಚನ್ನಾಂಬಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ, ಹೋರಾಟಗಾರ್ತಿ ಮಂಗಳಮ್ಮ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.