ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಸೌರ ಬೆಳಕು! ಕಟ್ಟಡಗಳಲ್ಲಿ ಸೌರ ಫಲಕಗಳ ಅಳವಡಿಕೆ

ಕಟ್ಟಡಗಳಲ್ಲಿ ಸೌರ ಫಲಕಗಳ ಅಳವಡಿಕೆ: ತಗ್ಗಲಿದೆ ವಿದ್ಯುತ್‌ ವೆಚ್ಚ
Last Updated 5 ಡಿಸೆಂಬರ್ 2021, 5:12 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣ, ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಟ್ಟಡಗಳು ಸೌರಶಕ್ತಿ ಫಲಕಗಳನ್ನು ಹೊದ್ದು ನಿಲ್ಲುತ್ತಿವೆ. ಇದರಿಂದ ಸೌರ ವಿದ್ಯುತ್ ಉತ್ಪಾದನೆ ಜೊತೆಗೆ ಇಲಾಖೆಗಳಿಗೆ ವಿದ್ಯುತ್ ವೆಚ್ಚದ ಹೊರೆಯೂ ತಪ್ಪುತ್ತಿದೆ.

ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸೌರ ಫಲಕಗಳನ್ನು ಅಳವಡಿಸುವಂತೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಸರ್ಕಾರಿ ಸೌಧಗಳಲ್ಲಿ ಸೌರ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಕಚೇರಿಗಳ ನಿರ್ವಹಣೆಗೆ ನೀಡಲಾಗುವ ಉಳಿತಾಯದ ಹಣದಲ್ಲೇ ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ. ಒಂದು ವೇಳೆ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆದಲ್ಲಿ ಅದನ್ನು ಬೆಸ್ಕಾಂ ಖರೀದಿ ಮಾಡಲಿದೆ.

ಜಿಲ್ಲೆಯ ಶಕ್ತಿ ಕೇಂದ್ರವಾದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ 6 ತಿಂಗಳ ಹಿಂದೆಯೇ 14ನೇ ಹಣಕಾಸು ಯೋಜನೆಯಡಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಘಟಕವು 60 ಕೆ.ವಿ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಕಟ್ಟಡದಲ್ಲಿ 13 ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಈ ಮೊದಲು ತಿಂಗಳಿಗೆ ₹1 ಲಕ್ಷದಷ್ಟು ಸರಾಸರಿ ವಿದ್ಯುತ್‌ ಬಿಲ್‌ ಬರುತ್ತಿತ್ತು. ಇದೀಗ ₹30–35 ಸಾವಿರಕ್ಕೆ ಈ ಬಿಲ್ ಇಳಿಕೆ ಆಗಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲಾ ಪಂಚಾಯಿತಿ ಭವನದಲ್ಲಿ ಕಳೆದ ಜುಲೈನಲ್ಲಿ 25 ಕೆ.ವಿ. ಸಾಮರ್ಥ್ಯದ ಸೌರ ಘಟಕವನ್ನು ಅಳವಡಿಸಲಾಗಿದೆ. ಸದ್ಯಕ್ಕಿನ್ನೂ ಪ್ರಾಯೋಗಾರ್ಥ ಬಳಕೆ ನಡೆದಿದ್ದು, ಇನ್ನು ಕೆಲವೇ ದಿನದಲ್ಲಿ ಅಧಿಕೃತವಾಗಿ ಬಳಕೆ ಆರಂಭ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಭವನದಲ್ಲಿ ಸರ್ಕಾರದ 32 ಇಲಾಖೆಗಳು ಕಚೇರಿ ಹೊಂದಿವೆ. ತಿಂಗಳಿಗೆ ₹2ರಿಂದ 2.25 ಲಕ್ಷದಷ್ಟು ವಿದ್ಯುತ್ ಬಿಲ್‌ ಬರುತ್ತಿದೆ. ಹೊಸ ವ್ಯವಸ್ಥೆಯಿಂದಾಗಿ ವಿದ್ಯುತ್ ಬಿಲ್‌ ಪ್ರಮಾಣ ತಗ್ಗಲಿದೆ.

ಜಿಲ್ಲೆಯಲ್ಲಿನ ಪೊಲೀಸ್ ಠಾಣೆಗಳಲ್ಲಿಯೂ ಸೌರ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ ನಡೆದಿದೆ. ಎಸ್ಪಿ ಕಚೇರಿಯಲ್ಲೂ ಮುಂದೆ ಈ ವ್ಯವಸ್ಥೆ ಬರಲಿದೆ. ಇದರೊಟ್ಟಿಗೆ ಜಿಲ್ಲೆಯ ತಾ.ಪಂ. ಭವನಗಳು. ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳ ಮೇಲೆಯೂ ಸೌರ ಫಲಕಗಳು ಸದ್ಯದಲ್ಲೇ ಕಂಗೊಳಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT