ಭಿನ್ನಾಭಿಪ್ರಾಯ ಬದಿಗಿಟ್ಟು ಗೆಲುವಿಗೆ ಶ್ರಮಿಸಿ: ಎಲವಳ್ಳಿ ನಾಗರಾಜು

ಬುಧವಾರ, ಏಪ್ರಿಲ್ 24, 2019
23 °C
ಗೇರಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರ ಪ್ರಚಾರ

ಭಿನ್ನಾಭಿಪ್ರಾಯ ಬದಿಗಿಟ್ಟು ಗೆಲುವಿಗೆ ಶ್ರಮಿಸಿ: ಎಲವಳ್ಳಿ ನಾಗರಾಜು

Published:
Updated:
Prajavani

ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ಅತ್ಯಧಿಕ ಮತಗಳ ಅಂತರದೊಂದಿಗೆ ಮೂರನೇ ಬಾರಿ ಸಂಸದರಾಗುವ ಮೂಲಕ ಹ್ಯಾಟ್ರಿಕ್‌ ಮಾಡಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಲವಳ್ಳಿ ನಾಗರಾಜು ಹೇಳಿದರು.

ತಾಲ್ಲೂಕಿನ ಸಾತನೂರು ಹೋಬಳಿ ಗೇರಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ಸೋಮವಾರ ನಡೆಸಿದ ಜಂಟಿ ಚುನಾವಣಾ ಪ್ರಚಾರದಲ್ಲಿ ಡಿ.ಕೆ.ಸುರೇಶ್‌ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ಡಿ.ಕೆ ಸುರೇಶ್ ಅವರು ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಅಜಾತಶತ್ರುವಾಗಿದ್ದಾರೆ. ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪಕ್ಷಕ್ಕಾಗಿ ವಿರೋಧಿಸುತ್ತಿದ್ದರೇ ಹೊರತು ವೈಯಕ್ತಿಕವಾಗಿ ಅಲ್ಲ; ಈಗ ಎರಡೂ ಪಕ್ಷದವರು ಒಟ್ಟಾಗಿರುವುದರಿಂದ ಕ್ಷೇತ್ರದಲ್ಲಿ ಶೇಕಡ 99ರಷ್ಟು ಮತಗಳು ಸುರೇಶ್‌ ಅವರಿಗೆ ಬರಲಿವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ವೆಂಕಟರಾಯನದೊಡ್ಡಿ ರಾಮು ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಾಡಿಕೊಂಡಿರುವ ಮೈತ್ರಿ ಧರ್ಮವನ್ನು ಕನಕಪುರ ತಾಲ್ಲೂಕಿನಲ್ಲಿ ಅಕ್ಷರಶಃ ಪಾಲಿಸಲಾಗುತ್ತಿದೆ. ಇಲ್ಲಿನ ಜೆಡಿಎಸ್‌ ಮುಖಂಡರು ತಮ್ಮಲ್ಲಿದ್ದ ವೈಮನಸ್ಸು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಪ್ರಾಮಾಣಿಕವಾಗಿ ಸುರೇಶ್‌ ಅವರ ಪರವಾಗಿ ದುಡಿಯುತ್ತಿದ್ದಾರೆ ಎಂದರು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಗೆಲವು ಸಾಧಿಸಿದ್ದ ಸುರೇಶ್‌ ಅವರು ಈ ಬಾರಿ ಐದು ಲಕ್ಷಕ್ಕೂ ಹೆಚ್ಚಿನ ಬಹಮತದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಮುಖಂಡ ಗೇರಳ್ಳಿ ರಾಜೇಶ್‌ ಮಾತನಾಡಿ, ತಾಲ್ಲೂಕಿನಲ್ಲಿ ಜೆಡಿಎಸ್‌ – ಕಾಂಗ್ರೆಸ್‌ ಪರಸ್ಪರ ವಿರೋಧ ಮಾಡಿಕೊಂಡೇ ಚುನಾವಣೆ ಎದುರಿಸಿದ್ದೇವೆ. ರಾಜಕೀಯವಾಗಿ ಸುರೇಶ್ ಮತ್ತು ಶಿವಕುಮಾರ್‌ಗೂ ಜೆಡಿಎಸ್‌ಗೂ ಭಿನ್ನಾಭಿಪ್ರಾಯಗಳಿವೆ, ರಾಜಕೀಯ ವಿರೋಧವಿದೆ. ಆದರೆ, ರಾಜ್ಯದಲ್ಲಿ ಪಕ್ಷದ ವರಿಷ್ಠರು ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ಮಾಡಿರುವುದರಿಂದ ಮೈತ್ರಿ ಧರ್ಮ ಪಾಲಿಸಬೇಕಿದೆ ಎಂದು ತಿಳಿಸಿದರು.

ಚೂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಎರಡೂ ಪಕ್ಷದ ಮುಖಂಡರು ಜತೆಗೂಡಿ ಮನೆ ಮನೆಗೆ ತೆರಳಿ ಸುರೇಶ್‌ ಪರವಾಗಿ ಮತಯಾಚನೆ ಮಾಡಿದ್ದೇವೆ. ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಎರಡೂ ಪಕ್ಷದ ಮುಖಂಡರಾದ ಸಣ್ಣಪ್ಪ, ಚಿಕ್ಕಣ್ಣ, ಶಿವಣ್ಣ, ರಾಜು, ರವೀಶ್‌, ನಾಗೇಶ್‌, ಸಂಜಯ್‌ಕುಮಾರ್‌, ಕರಿಯಪ್ಪ, ಅಶ್ವಥ್‌ ಸೇರಿದಂತೆ ಅನೇಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !