ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀನರಸಿಂಹ ರಥೋತ್ಸವಕ್ಕೆ ಸುಗ್ಗನಹಳ್ಳಿ ಸಜ್ಜು

ವಿವೇಕ್ ಕುದೂರು
Published 23 ಮಾರ್ಚ್ 2024, 5:36 IST
Last Updated 23 ಮಾರ್ಚ್ 2024, 5:36 IST
ಅಕ್ಷರ ಗಾತ್ರ

ಕುದೂರು: ಹೋಬಳಿಯ ಇತಿಹಾಸ ಪ್ರಸಿದ್ಧ ಸುಗ್ಗನಹಳ್ಳಿಯ ಲಕ್ಷ್ಮೀನರಸಿಂಹ ಬ್ರಹ್ಮರಥೋತ್ಸವವು ಮಾರ್ಚ್ 24ರಂದು ಮಧ್ಯಾಹ್ನ 1.30ರಿಂದ 2 ಗಂಟೆಯ ಶುಭ ಲಗ್ನದಲ್ಲಿ ಅದ್ದೂರಿಯಾಗಿ ನಡೆಯಲಿದೆ. 

ಮುಜರಾಯಿ ಇಲಾಖೆಯಿಂದ  ರಥೋತ್ಸವ ನಡೆಯಲಿದೆ. 24ರ ಸಂಜೆ 6ಕ್ಕೆ ಎಳನೀರು ಸೇವೆ, ಶೇಷವಾಹನೋತ್ಸವ , 25ರಂದು ಸೂರ್ಯ ಮಂಡಲೋತ್ಸವ, ಮಂಟಪ ಪಡಿಸೇವೆ, ಡೋಲೋತ್ಸವ, ರಾತ್ರಿ 10 ಗಂಟೆಗೆ ಗರುಡೋತ್ಸವ, ಕುದುರೆ ಉತ್ಸವ, 26ರಂದು ಅವಭೃತ ಸ್ನಾನ, ಹಂಸ ವಾಹನೋತ್ಸವ, ಧ್ವಜಾರೋಹಣ, ಪಲ್ಲಕ್ಕಿ ಉತ್ಸವ, 27ರಂದು ಪುಷ್ಪ ಯಾಗ ಸೇವೆ, ಮಧ್ಯಾಹ್ನ 2 ಗಂಟೆಗೆ ತಿಪ್ಪಸಂದ್ರ ಮತ್ತು ಕುದೂರು ಹೋಬಳಿ ಶಿಕ್ಷಕ ಸಮಿತಿ ವತಿಯಿಂದ ಗರುಡೋತ್ಸವ, ಜಲಕ್ರೀಡೋತ್ಸವ, 28ರಂದು ಅಂಬೆಗಾಲು ಕೃಷ್ಣನ ಸೇವೆ, 29ರಂದು ರಾತ್ರಿ 8 ಗಂಟೆಗೆ ಕುದೂರು ಪೊಲೀಸ್ ಇಲಾಖೆ ವತಿಯಿಂದ ಶಯನೋತ್ಸವ, ಸುಪ್ರಭಾತ ಸೇವೆ, ಮಹಾಸ್ನಪನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವಾಲಯದ ಇತಿಹಾಸ: ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ದೇವಾಲಯವು ಚೋಳರ ಕಾಲದ ಪುರಾತನ ದೇವಾಲಯ. ಇಲ್ಲಿ ಪ್ರತಿದಿನ ಗರುಡನನ್ನು ಪೂಜಿಸಲಾಗುತ್ತದೆ. ಗರುಡ ದೇವರ ವಿಗ್ರಹ ಅಧ್ಯಾತ್ಮ ನೋಟ ಬೀರುವಂತಿದೆ. ಇಲ್ಲಿನ ಗರುಡನ ದರ್ಶನ ಪಡೆದರೆ  ಸಮಸ್ಯೆ ಪರಿಹಾರವಾಗುತ್ತದೆ. ಅದರಲ್ಲೂ ಸರ್ಪದೋಷ ಮತ್ತು ನಾಗರಹುಣ್ಣು ಸಮಸ್ಯೆ ಬಗೆಹರಿಯುತ್ತವೆ, ಮದುವೆ ಭಾಗ್ಯ ಮತ್ತು ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.

ಸುಗ್ಗನಹಳ್ಳಿ 'ಶುಕಪುರಿ' ಎಂಬ ಹೆಸರಿನಿಂದಲೂ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರವು ರಾಜ್ಯದ ಹೆಸರಾಂತ ವೈಷ್ಣವ ಕ್ಷೇತ್ರಗಳಲ್ಲಿ ಒಂದು. ವ್ಯಾಸ ಮಹರ್ಷಿ ಪುತ್ರ ಶುಕ ಮಹರ್ಷಿ ಅವರಿಂದ ಈ ಕ್ಷೇತ್ರವು ಸ್ಥಾಪಿತವಾಗಿದ್ದು, ಅವರು ತಮ್ಮ ಶಿಷ್ಯರೂಡನೆ ದೇಶ ಪರ್ಯಟನೆ ಮಾಡುವ ಸಂದರ್ಭದಲ್ಲಿ ಈ ಪ್ರದೇಶವನ್ನು ಕಂಡು ತಮ್ಮ ತಪಸ್ಸಿಗೆ ಯೋಗ್ಯವಾದ ಸ್ಥಳವೆಂದು ಭಾವಿಸಿ ಇಲ್ಲಿಯೇ ತಮ್ಮ ಋಷ್ಯಾಶ್ರಮವನ್ನು ಸ್ಥಾಪಿಸಿದರೆಂದು ಇತಿಹಾಸ ತಿಳಿಸುತ್ತದೆ. ಇದರಿಂದ ಈ ಸ್ಥಳಕ್ಕೆ ಶುಕಪುರಿ ಎಂಬ ಹೆಸರು ಬಂದಿದೆ.

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಿಶೇಷತೆಯೆಂದರೆ ದೇವರಿಗೆ ಮುಸ್ಲಿಂ ಭಕ್ತರು ಹೆಚ್ಚಾಗಿರುವುದು. ದೇವಾಲಯದ ಎದುರುಗಿರುವ ಬೃಂದಾವನದಲ್ಲಿ ಶುಕ ಮಹರ್ಷಿ ಐಕ್ಯರಾಗಿದ್ದಾರೆ ಎಂಬ ಪ್ರತೀತಿ ಇದೆ. 

ಪ್ರಹ್ಲಾದನಿಂದ ಜೀರ್ಣೋದ್ದಾರ: ಹಿರಣ್ಯಕಶಿಪುವಿನ ಮಗ ಪ್ರಹ್ಲಾದನಿಂದ ಸುಗ್ಗನಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ದಾರಗೊಂಡಿದೆ ಎಂಬುದು ನಂಬಿಕೆ. ಶುಕಪುರಿಗೆ ಬಂದ ಪ್ರಹ್ಲಾದ ‘ಓಂ ನಮೋ ನಾರಾಯಣಾಯ’ ಎಂಬ ಅಷ್ಟಾಕ್ಷರಿ ಮಂತ್ರ ಜಪಿಸಿದಾಗ ಇಡೀ ಪ್ರದೇಶ ವಿಷ್ಣುಮಯವಾಗಿ ನರಸಿಂಹಸ್ವಾಮಿಯ ನೆಲೆಯಾಯಿತಂತೆ. ನಂತರ ಶುಕ ಮುನಿಗಳ ತಪ್ಪಸಿಗೆ ಪ್ರಸನ್ನನಾದ ನರಸಿಂಹಸ್ವಾಮಿ ಕಂಬದ ರೂಪದಲ್ಲಿ ಪ್ರತ್ಯಕ್ಷನಾಗಿ ಕಂಬದಲ್ಲೇ ನೆಲೆಗೊಂಡ. ಇದು ದೇವಾಲಯದ ಮೂಲ ದೇವರಾಗಿದ್ದು ಕಂಬದ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ. 

ಗರುಡ ಪ್ರದಕ್ಷಿಣೆ: ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದ ವೇಳೆ ಗರುಡ ಪಕ್ಷಿಯೊಂದು ಬಂದು ಬೃಹತ್ ರಥದ ಪ್ರದಕ್ಷಿಣೆ ಹಾಕುವ ವಿಚಿತ್ರ ಕೂಡ ಇಲ್ಲಿ ನಡೆಯುತ್ತದೆ. ಗರುಡ ಪ್ರದಕ್ಷಿಣೆ ನಂತರವೇ ರಥ ಮುಂದೆ ಸಾಗುತ್ತದೆ. ಈ ದೃಶ್ಯವನ್ನು ಇಂದಿಗೂ ಕಾಣಬಹುದು.

ಕುದೂರು ಹೋಬಳಿ ಸುಗ್ಗನಹಳ್ಳಿಯ ಗರುಡ ದೇವರು
ಕುದೂರು ಹೋಬಳಿ ಸುಗ್ಗನಹಳ್ಳಿಯ ಗರುಡ ದೇವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT