ಮಂಗಳವಾರ, ನವೆಂಬರ್ 24, 2020
26 °C

ಚನ್ನಪಟ್ಟಣ: ಗಾಂಧಿ ಕನಸು ಇನ್ನೂ ಈಡೇರಿಲ್ಲ- ಡಾ.ವೂಡೇ ಪಿ. ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಇನ್ನೂ ಸಾಕಾರಗೊಂಡಿಲ್ಲ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ವಿಷಾದಿಸಿದರು.

ತಾಲ್ಲೂಕಿನ ಬೇವೂರು ಗ್ರಾಮದ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಯುವ ಸಬಲೀಕರಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಶನಿವಾರ ನಡೆದ ವಿವಿಧ ದತ್ತಿ ಪುರಸ್ಕಾರ, ಸಸಿ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸಿಕ್ಕಿರುವುದು ಕೇವಲ ರಾಜಕೀಯ ಸ್ವಾತಂತ್ರ್ಯ. ಆರ್ಥಿಕ, ಸಾಂಸ್ಕೃತಿಕ, ನೈತಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಗಾಂಧೀಜಿ ಅವರ ಕಲ್ಪನೆಯ ದೇಶ ಕಟ್ಟಲು ನಾವು ಇನ್ನೂ ಅಸಮರ್ಥರಾಗಿದ್ದೇವೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸ್ವಾತಂತ್ರ್ಯ ನಮಗೆ ಸಿಗಬೇಕಿದೆ. ಗಾಂಧಿಯ ಗ್ರಾಮ ಸ್ವರಾಜ್ಯದ ಕಲ್ಪನೆ ಈಡೇರಬೇಕಿದೆ. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ನಡೆದ ಸ್ವರಾಜ್ಯ ಎನ್ನುವ ಕಲ್ಪನೆ ಈಗ ಸುರಾಜ್ಯ ಆಗಬೇಕಿದೆ’ ಎಂದು ಆಶಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಸ್ಮಾರಕ ನಿಧಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ದುಡಿದ ಗಣ್ಯರನ್ನು ಸನ್ಮಾನಿಸುವ ಮೂಲಕ ಸಮಾಜದಲ್ಲಿ ಇತರರಿಗೆ ಸ್ಫೂರ್ತಿ ನೀಡುವುದೇ ನಮ್ಮ ಉದ್ದೇಶವಾಗಿದೆ. ವಿವಿಧ ದತ್ತಿಗಳ ಮೂಲಕ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಜೆ.ಎಂ. ಸುಮಂತ್ ಗೌಡ, ಬಿ.ಆರ್. ವಿಜಯ್, ಬಿ.ಆರ್. ಅಖಿಲೇಶ್, ಜಿ. ಅನನ್ಯಾ, ಎಸ್. ಅಂಜಲಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಟಿ.ಆರ್. ರಂಗಸ್ವಾಮಿ, ಎಚ್.ಎಂ. ರಮೇಶ್, ಶಾರದಾ ನಾಗೇಶ್, ಎನ್. ಜಯರಾಂ, ಯೋಗೇಶ್ ಚಕ್ಕೆರೆ ಅವರನ್ನು ಸನ್ಮಾನಿಸಲಾಯಿತು. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆವಹಿಸಿದ್ದರು. ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಎಸ್. ರಾಮಲಿಂಗೇಶ್ವರ್ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎನ್. ಕಾಡಯ್ಯ, ಎನ್ಎಸ್ಎಸ್ ಯೋಜನಾಧಿಕಾರಿ ಡಾ.ಪೂರ್ಣಿಮಾ ಜೋಗಿ, ಪ್ರಾಂಶುಪಾಲ ಡಿ.ಸಿ. ಸುರೇಶ್, ಟ್ರಸ್ಟಿ ವಸಂತಕುಮಾರ್, ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.