ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಟ್ಟದ ರೈತ ಸಮಾವೇಶ- ಅಧಿಕಾರಿಗಳ ಸಭೆ ಕರೆಯಲು ರೈತ ಸಂಘ ಒತ್ತಾಯ

Last Updated 9 ಮಾರ್ಚ್ 2022, 7:51 IST
ಅಕ್ಷರ ಗಾತ್ರ

ಚನ್ನಪಟ್ಟಣ: ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕ್ಷೇತ್ರದ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ಕರೆಯಬೇಕು ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಒತ್ತಾಯಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಮಾನ ಮನಸ್ಕರ ಸಹಭಾಗಿತ್ವದ ರೈತ ಸಂಘದ ತಾಲ್ಲೂಕು ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ರೈತರು ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ತಮ್ಮ ಕೆಲಸಗಳಿಗೆ ಪರಿತಪಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆ ಅಗತ್ಯವಾಗಿ ನಡೆಯಬೇಕು ಎಂದರು.

ಸಭೆಯಲ್ಲಿ ಕ್ಷೇತ್ರದ ಶಾಸಕರ ಜೊತೆಗೆ ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಬೇಕು. ರೈತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಬೇಕು. ಇದರ ಜೊತೆಗೆ ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಂದಾಯ, ಬೆಸ್ಕಾಂ, ಅರಣ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಉದಾಸೀನದಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರನ್ನು ಕೇವಲ ಸಬ್ಸಿಡಿ ಪಡೆಯುವ ಫಲಾನುಭವಿಗಳು ಎಂಬಂತೆ ಜಿಲ್ಲಾಡಳಿತ ಮತ್ತು ಸರ್ಕಾರದ ಇಲಾಖೆಗಳು ಪರಿಗಣಿಸಿವೆ. ರೈತ ಜಾಗೃತನಾದರೆ ಎಲ್ಲಿ ನಮಗೆ ಸಂಚಕಾರ ಬರುತ್ತದೋ ಎಂದು ರಾಜಕಾರಣಿಗಳು ಮತ್ತು ಅಧಿಕಾರಿಗಳು ಆತಂಕದಿಂದ ಸಬ್ಸಿಡಿ, ಸೌಲಭ್ಯ ಎಂಬ ತುಪ್ಪವನ್ನು ಮೂಗಿಗೆ ಸವರುತ್ತಾ ಅನ್ಯಾಯ ಮಾಡುತ್ತಿದ್ದಾರೆ. ಇದು ಬದಲಾಗಬೇಕು ಎಂದು
ಆಗ್ರಹಿಸಿದರು.

ನಾವು ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಸದೃಢ ರೈತ ಸಂಘವನ್ನು ಕಟ್ಟಲು ಮುಂದಾಗಿದ್ದೇವೆ. ಇದಕ್ಕೆ ರೈತರು ಮುಕ್ತವಾಗಿ ಸಹಕಾರ ನೀಡುತ್ತಿದ್ದಾರೆ. ಈ ಸಂಘಟನೆಗಳನ್ನು ನಗರದಿಂದ ಹಳ್ಳಿಯತ್ತ ತೆಗೆದುಕೊಂಡು ಹೋಗುವ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಈ ಮೂಲಕ ರೈತರನ್ನು ಜಾಗೃತಗೊಳಿಸಿ, ಅವರ ಅನ್ಯಾಯಗಳ ವಿರುದ್ಧ ಅವರಿಂದಲೇ ಹಕ್ಕೊತ್ತಾಯ ಮಂಡಿಸುತ್ತೇವೆ ಎಂದು ವಿವರಿಸಿದರು.

ರೈತ ಮಹಿಳೆ ಸುಶೀಲಮ್ಮ ಅಧ್ಯಕ್ಷತೆವಹಿಸಿದ್ದರು. ಪದಾಧಿಕಾರಿಗಳಾದ ಧರಣೀಶ್ ರಾಂಪುರ, ಕನಕಪುರ ನಂಜಪ್ಪ, ಹೊಂಬಾಳೆಗೌಡ, ದೇವೇಗೌಡ, ಕನಕಪುರ ನಂಜಪ್ಪ, ಸತೀಶ್, ಮಂಜುನಾಥ್, ಮಾಗಡಿ ಗಿರೀಶ್, ಪ್ರಕಾಶ್, ಪಾಪಣ್ಣ, ಜಗದೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT