ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಪಿಸಿಎಂಎಸ್ ಚುನಾವಣೆ: ಕಣದಲ್ಲಿ 32 ಮಂದಿ

Published 28 ನವೆಂಬರ್ 2023, 14:54 IST
Last Updated 28 ನವೆಂಬರ್ 2023, 14:54 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಆಡಳಿತ ಮಂಡಳಿಗೆ ಡಿ.3 ರಂದು ಚುನಾವಣೆ ನಡೆಯಲಿದ್ದು, ಅಂತಿಮವಾಗಿ 32 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ರೇವಹೆಗ್ಗಡೆ ಅವಿರೋಧ ಆಯ್ಕೆಯಾದರು. ಉಳಿದ 11 ಸ್ಥಾನಗಳಿಗೆ ಚುನಾವಣೆ ಅಂತಿಮಗೊಂಡಿದೆ.

11 ಸ್ಥಾನಗಳ ಅಂತಿಮ ಕಣದಲ್ಲಿ ಎ ತರಗತಿಯ 5 ನಿರ್ದೇಶಕ ಸ್ಥಾನಕ್ಕೆ 9 ಮಂದಿ, ಬಿ ತರಗತಿಯ 6 ಸ್ಥಾನಗಳಿಗೆ ಒಟ್ಟು 23 ಮಂದಿ ಸೇರಿದಂತೆ ಒಟ್ಟು 32 ಮಂದಿ ಉಳಿದುಕೊಂಡಿದ್ದಾರೆ.

ಸಂಘದ ನಿರ್ದೇಶಕರಾಗಲು ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿತರು ಕಣದಲ್ಲಿ ಉಳಿದುಕೊಂಡಿದ್ದು, ಕೆಲವು ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಸ್ಪರ್ಧೆಯಲ್ಲಿದ್ದರೂ ಜೆಡಿಎಸ್ ಬೆಂಬಲಿತರಲ್ಲಿಯೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ.

ಚುನಾವಣೆ ಮೇಲೆ ಅಕ್ಕಿ ನಾಪತ್ತೆ ಕರಿನೆರಳು: ಟಿಎಪಿಸಿಎಂಎಸ್ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಗಾಗಿ ದಿನಾಂಕ ನಿಗದಿಯಾಗಿ ಸ್ಪರ್ಧಿಗಳ ನಡುವೆ ಸಾಕಷ್ಟು ಪೈಪೋಟಿ ಎದುರಾಗಿದ್ದರೂ ಇತ್ತ ಸಂಸ್ಥೆಯ ಗೋದಾಮಿನಿಂದ ಅಕ್ಕಿ ನಾಪತ್ತೆಯಾಗಿರುವ ಪ್ರಕರಣ ಚುನಾವಣೆಯ ಮೇಲೆ ಸಾಕಷ್ಟು ಕರಿನೆರಳು ಆವರಿಸುವಂತೆ ಮಾಡಿದೆ.  ಟಿಎಪಿಸಿಎಂಎಸ್ ಗೋದಾಮಿನಲ್ಲಿ ಬಡವರಿಗೆ ಹಂಚಲು ಸಂಗ್ರಹಿಸಿದ್ದ ಸುಮಾರು 3200 ಚೀಲಗಳಲ್ಲಿದ್ದ ಅಂದಾಜು ರೂ. 52 ಲಕ್ಷ ಮೌಲ್ಯದ 1600 ಕ್ವಿಂಟಲ್ ಅಕ್ಕಿ ಹಾಗೂ ರಾಗಿ ನಾಪತ್ತೆಯಾಗಿತ್ತು. ಪ್ರಕರಣ ನ.22 ರ ಬುಧವಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣ ಹೊರಬರುವ ಮೊದಲೇ ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದ ಕಾರಣ ಚುನಾವಣಾ ವೇಳಾಪಟ್ಟಿಯಂತೆ ಪ್ರಕ್ರಿಯೆ ಮುಂದುವರೆದಿದೆ.

ಈ ನಡುವೆ ಅಕ್ಕಿ ಹಗರಣ ಆರೋಪ ಹಾಗೂ ಸಂಸ್ಥೆಯಲ್ಲಿ ನಡೆದಿರುವ ಹಣದ ದುರುಪಯೋಗ ಆರೋಪದಡಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ತಾಲ್ಲೂಕು ಕಾಂಗ್ರೆಸ್ ಮುಖಂಡರು ಸೋಮವಾರ ಸಂಸ್ಥೆಯ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಕೆ.ಟಿ.ಉಮೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಸಂಘದ ಚುನಾವಣಾ ಕಣದಲ್ಲಿ ಉಳಿದಿರುವ ಸ್ಪರ್ಧಿಗಳು ಸಂಘದ ಸದಸ್ಯರಾಗಿರುವ ಮತದಾರರ ಮನಗೆಲ್ಲಲು ಕಸರತ್ತು ಆರಂಭಿಸಿದ್ದಾರೆ.

ಚಂದ್ರಶೇಖರ್‌ಗೆ ಜಾಮೀನು

ಅಕ್ಕಿ ಕಳವು ಪ್ರಕರಣದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಟಿಎಪಿಸಿಎಂಎಸ್ ವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಸೋಮವಾರ ನಗರದ ನ್ಯಾಯಾಲಯ ಜಾಮೀನು ನೀಡಿದೆ. ಟಿಎಪಿಸಿಎಂಎಸ್ ಗೋದಾಮಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಚಂದ್ರಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಳೆದ ಶುಕ್ರವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಮಹೇಂದ್ರ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT