ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ಪ್ರವೇಶ–ನಿರ್ಗಮನ ದ್ವಾರದ್ದೇ ಚಿಂತೆ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ; ಇಂದು ಕೇಂದ್ರ ಸಾರಿಗೆ ಸಚಿವರಿಂದ ಪರಿಶೀಲನೆ
Last Updated 4 ಜನವರಿ 2023, 21:17 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದರೂ, ಪ್ರಮುಖ ನಗರಗಳಿಗೆ ಪ್ರವೇಶ–ನಿರ್ಗಮನ ದ್ವಾರಗಳು ಇನ್ನೂ ಅಂತಿಮವಾಗಿಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ಪ್ರಯಾಣಿಕರ ಪರದಾಟ ತಪ್ಪಿಲ್ಲ.

ಹತ್ತು ಪಥಗಳ ಹೆದ್ದಾರಿಯಲ್ಲಿ ಆರು ಪಥಗಳು ಎಕ್ಸ್‌ಪ್ರೆಸ್‌ ವೇಗೆ ಮೀಸಲಿದ್ದು, ಇನ್ನು ನಾಲ್ಕು ಪಥದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಆಗಿದೆ. ಬೆಂಗಳೂರಿನ ನೈಸ್‌ ರಸ್ತೆ ಜಂಕ್ಷನ್‌ನಿಂದ ಆರಂಭಗೊಂಡು ಮೈಸೂರಿನ ಮಣಿಪಾಲ್‌ ಆಸ್ಪತ್ರೆ ವೃತ್ತದವರೆಗೆ 118 ಕಿ.ಮೀ ಉದ್ದದ ಹೆದ್ದಾರಿಯ ಮಧ್ಯೆ ತಲಾ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರ ನೀಡಿ ಎಕ್ಸ್‌ಪ್ರೆಸ್‌ ವೇ ಅನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಈ ಮಾರ್ಗ ಮಧ್ಯದಲ್ಲಿನ ಆರು ನಗರಗಳ ಪ್ರಯಾಣಿಕರಿಗೂ ಓಡಾಟಕ್ಕೆ ಅವಕಾಶ ನೀಡಬೇಕು ಎಂಬ ಒತ್ತಡ ಕೇಳಿಬಂದು ಹೆದ್ದಾರಿ ಪ್ರಾಧಿಕಾರ ಅದಕ್ಕೆ ಒಪ್ಪಿಗೆ ಸೂಚಿಸಿದ್ದರೂ ಹಳೇ ವಿನ್ಯಾಸದಲ್ಲೇ ಕಾಮಗಾರಿ ಮುಗಿಯುತ್ತಿದೆ.

ಬೆಂಗಳೂರು–ಮೈಸೂರು ಮಾರ್ಗ ಮಧ್ಯೆ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ನಗರಗಳಿಗೆ ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರವು ಪ್ರತ್ಯೇಕ ಪ್ರಸ್ತಾವ ಸಲ್ಲಿಸಿದ್ದು, ಇದಕ್ಕೆ ಇನ್ನೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಲ್ಲ.

₹1201 ಕೋಟಿ ಮೊತ್ತದ ಯೋಜನೆ: ಆರು ನಗರಗಳಿಗೆ ಪ್ರವೇಶ–ನಿರ್ಗಮನದ ಸಂಬಂಧ ಪ್ರಾಧಿಕಾರವು ಒಟ್ಟು ₹1201 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ನಗರಗಳಿಗೆ ಕೆಲವೇ ಕಿ.ಮೀ. ದೂರದಲ್ಲಿ ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಕುಂಬಳಗೋಡು ಟೋಲ್ ಪ್ಲಾಜಾ, ಬಿಡದಿ, ರಾಮನಗರದ ಕೆಂಪೇಗೌಡನದೊಡ್ಡಿ, ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಇಲ್ಲವೇ ಮತ್ತಿಕೆರೆ–ಶೆಟ್ಟಿಹಳ್ಳಿ, ಮದ್ದೂರು ತಾಲ್ಲೂಕಿನ ನಿಡಘಟ್ಟ, ಮಂಡ್ಯ ಬೈಪಾಸ್ ( ಹೋಟೆಲ್‌ ಅಮರಾವತಿ ಬಳಿ), ಶ್ರೀರಂಗಪಟ್ಟಣ ಟೋಲ್‌ (ಗಣಂಗೂರು) ಇಲ್ಲವೇ ಕರಿಘಟ್ಟ ರಸ್ತೆ ಬಳಿ ವಾಹನಗಳು ಎಕ್ಸ್‌ಪ್ರೆಸ್ ವೇ ಏರಲು ಇಲ್ಲವೇ ಇಳಿಯಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇಲ್ಲಿಯೇ ಟೋಲ್‌ ಸಂಗ್ರಹ ವ್ಯವಸ್ಥೆಯೂ ಇರಲಿದೆ. ಇದನ್ನು ಹೊರತುಪಡಿಸಿ ಸರ್ವೀಸ್‌ ರಸ್ತೆಗಳಲ್ಲಿ ವಾಹನಗಳು ಎಂದಿನಂತೆ ಸಂಚರಿಸಲು ಅವಕಾಶ ಇದೆ.

ಒಮ್ಮೆ ಕೇಂದ್ರ ಸಾರಿಗೆ ಸಚಿವಾಲಯ ಅನುಮತಿ ನೀಡಿದ ಬಳಿಕ ಮತ್ತೆ ಅಗತ್ಯವಾದ ಭೂಸ್ವಾಧೀನ ಹಾಗೂ ಟೆಂಡರ್ ಪ್ರಕ್ರಿಯೆಗಳು ಆರಂಭ ಆಗಲಿವೆ. ಆದಾಗ್ಯೂ ಕಾಮಗಾರಿ ಮುಗಿದು ಪ್ರಯಾಣಿಕರಿಗೆ ಅನುಕೂಲ ಆಗಲು ಇನ್ನೂ ವರ್ಷಗಳು ಕಾಯಬೇಕಿದೆ.

ಅಪಘಾತಗಳದ್ದೇ ಸದ್ದು; 22 ಮಂದಿ ಸಾವು

ಕಳೆದ ಮೂರು ತಿಂಗಳ ಅವಧಿಯಲ್ಲಿ ಕುಂಬಳಗೋಡಿನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗೆ ಎಕ್ಸ್‌ಪ್ರೆಸ್‌ ವೇನಲ್ಲಿ ಒಟ್ಟು 65 ಅಪಘಾತ ನಡೆದಿದ್ದು, 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ವೇಗ ಮಿತಿ ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ ಎಲ್ಲಿಯೂ ಪ್ರಯಾಣಿಕರ ಸುರಕ್ಷತೆಗೆ ಬೇಕಾದ ಸೌಕರ್ಯಗಳನ್ನು ಅಳವಡಿಸುವ ಕಾರ್ಯ ಆಗಿಲ್ಲ. ಬೈಪಾಸ್‌ಗಳಲ್ಲಿ ಹೈವೆ ಪೆಟ್ರೋಲಿಂಗ್‌, ಸೈನ್‌ ಬೋರ್ಡ್‌ಗಳ ಅಳವಡಿಕೆ, ಅಪಘಾತ ವಲಯಗಳ ಗುರುತಿಸುವಿಕೆ ಕಾರ್ಯಗಳು ನಡೆಯಬೇಕಿದೆ.

ಮಳೆಗೆ ಬಣ್ಣ ಬಯಲು

ಗುರುವಾರ ಮಧ್ಯಾಹ್ನ 12.15ಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ರಾಮನಗರದಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನ ಗುಣಮಟ್ಟ ಪರಿಶೀಲನೆ ಮಾಡಲಿದ್ದಾರೆ.

ಈ ಹೆದ್ದಾರಿ ಕಾಮಗಾರಿ ಬಗ್ಗೆ ಈಗಾಗಲೇ ಸಾಕಷ್ಟು ಅಪಸ್ವರ ಕೇಳಿಬಂದಿವೆ. ಸಂಸದರಾದ ಡಿ.ಕೆ. ಸುರೇಶ್, ಸುಮಲತಾ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದಿಯಾಗಿ ಸಾಕಷ್ಟು ಮಂದಿ ಇದರ ಗುಣಮಟ್ಟ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಬೆಂಗಳೂರು–ಮೈಸೂರು ಹೆದ್ದಾರಿಯು ಕೆರೆಯಂತೆ ಆಗಿದ್ದು, ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ನಂತರವೂ ದುರಸ್ತಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಸರ್ವೀಸ್ ರಸ್ತೆ ಮತ್ತು ಮಳೆ ನೀರು ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳಿವೆ. ಕೇಂದ್ರ ಸಚಿವರು ಈ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಸೂಚಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT