ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ಹಾಳು ಕೊಂಪೆಯಾದ ಸಾವನದುರ್ಗ ಕೋಟೆ

ಕಾಲನ ಲೀಲೆಗೆ ಸಿಲುಕಿ ಕಣ್ಮರೆ * ಸ್ಮಾರಕಗಳ ರಕ್ಷಣೆಗೆ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆ ಮುಂದಾಗಲಿ
Last Updated 1 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮಾಗಡಿ: ಸಾವನದುರ್ಗದ ಏಳುಸುತ್ತಿನ ಕೋಟೆ ಕಾಲನ ಲೀಲೆಗೆ ಸಿಲುಕಿ ಕಣ್ಮರೆಯಾಗುತ್ತಿದೆ. ಚಾರಿತ್ರಿಕ ಕೋಟೆ ರಕ್ಷಿಸಲು ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕೆಂದು ಇತಿಹಾಸ ಪ್ರಿಯರ ಆಗ್ರಹವಾಗಿದೆ.

ದೇಸಿ ಗಾರೆಗಚ್ಚು ಬಳಸಿ ಕೋಟೆಗಳ ನಿರ್ಮಾಣ ಪ್ರತಿಯೊಬ್ಬ ಪಾಳೇಗಾರರ ವಂಶದ ಗೌರವ ಸಂಕೇತವಾಗಿತ್ತು. ಅರ್ಕಾವತಿ ಮತ್ತು ಕಣ್ವ, ಕುಮುದ್ವತಿ ನದಿಗಳ ಸಂಗಮದ ಪುಣ್ಯಭೂಮಿ ಸಾವನದುರ್ಗ. ಸಂಪಾಜೆರಾಯ ಮತ್ತು ಸಾವಂದರಾಯ ಸಹೋದರರು ಮಣ್ಣಿನ ಏಳುಸುತ್ತಿನ ಕೋಟೆ ನಿರ್ಮಿಸಿಕೊಂಡು ಪ್ರಜೆಗಳ ರಕ್ಷಕರಾಗಿ ಇಲ್ಲಿ ಆಳ್ವಿಕೆ ನಡೆಸಿದರು ಎಂಬುದು ಚೆರಿತ್ರೆ ದಾಖಲೆಗಳಲ್ಲಿ ಉಲ್ಲೇಖವಿದೆ. ಸಂಪಾಜೆರಾಯನೆಂಬ ಪಾಳೇಗಾರ ಸಾನವದುರ್ಗದ ತಪ್ಪಲಿನಲ್ಲಿ ಗಿರಿದುರ್ಗ ನಿರ್ಮಿಸಿಕೊಂಡು, ರಾಮದುರ್ಗ, ಹುತ್ರಿದುರ್ಗ, ಹುಲಿಯೂರುದುರ್ಗ, ಹುಲಿಕಲ್, ಕುಣಿಗಲ್‌ ದುರ್ಗ,ಮಧುಗಿರಿ, ಶ್ವಾರಗಿರಿ, ಮಿಡಿಗೇಶಿ ಪಾಳೇಗಾರರನ್ನು ಸದೆಬಡಿದು ಪ್ರಜಾಚಿಂತಕನಾಗಿಯೂ, ದೈವಭಕ್ತನಾಗಿಯೂ ಆಳ್ವಿಕೆ ನಡೆಸಿದ.

ನಂತರ ಅವರ ಸೋದರ ಸಾವಂದರಾಯ ಅಣ್ಣ ನಡೆಸಿದ್ದ ಜನೋಪಯೋಗಿ ಆಡಳಿತ ಮುಂದುವರಿಸಿದ. ಬೆಟ್ಟದ ತಪ್ಪಲಿನಲ್ಲಿ ಕೆರೆಕಟ್ಟೆ, ಕಲ್ಯಾಣಿ ನಿರ್ಮಿಸಿದ. ಬೆಟ್ಟದ ವಿವಿಧೆಡೆ ಬಂಡೆಗಳ ಮೇಲೆ ಆಂಜನೇಯ , ಬಸವಣ್ಣ, ವಿನಾಯಕ, ತಿಮ್ಮಪ್ಪ, ಕಣ್ಣಪ್ಪ ವಿಗ್ರಹಗಳನ್ನು ಕೆತ್ತಿಸಿ ಗುಡಿಗೋಪುರ ನಿರ್ಮಿಸಿದ. ಅವುಗಳ ರಕ್ಷಣೆಗಾಗಿ ಏಳುಸುತ್ತಿನ ಕೋಟೆಯನ್ನು ಭದ್ರಪಡಿಸಿದ.

ಗುಡೇಮಾರನಹಳ್ಳಿ ಪಾಳೇಗಾರ ದಂಡಪ್ಪನಾಯಕನ ಪುತ್ರ ಧೈರ್ಯಶಾಲಿ, ಹುಲಿಗಳ ಬೇಟೆಗಾರ. ತಳಾರಿ ಗಂಗಪ್ಪ ನಾಯಕ ಮಾಗಡಿಯಲ್ಲಿ ಮಣ್ಣಿನ ಕೋಟೆಕೊತ್ತಲ ಕಟ್ಟಿಸಿಕೊಂಡು ಆಳ್ವಿಕೆ ನಡೆಸಿದ. ಸಾವಂದರಾಯನಿಗೆ ಮತ್ತು ತಳಾರಿ ಗಂಗಪ್ಪನಾಯಕನಿಗೆ ಮನಸ್ತಾಪ ಉಂಟಾಗಿ ಕದನ ನಡೆಯಿತು. ಕದನದಲ್ಲಿ ಸಾವಂದರಾಯ ಹತನಾದ. ಮುಂದೆ ಸಾವನದುರ್ಗ ತಳಾರಿ ಗಂಗಪ್ಪನಾಯಕ ಅಳ್ವಿಕೆಗೆ ಒಳ‍‍ಪಟ್ಟಿತು.

ಕ್ರಿ.ಶ.1612ರಲ್ಲಿ ಬಿಜಾಪುರದ ದಂಡನಾಯಕ ರಣದುಲ್ಲಾಖಾನ್ ಬೆಂಗಳೂರು ವಶಪಡಿಸಿಕೊಂಡ. ಇಮ್ಮಡಿ ಕೆಂಪೇಗೌಡ ರಾಜಲಾಂಛನದೊಂದಿಗೆ ಸಾವನದುರ್ಗದ ಮೇಲೆ ದಾಳಿ ಮಾಡಿ ತಳಾರಿ ಗಂಗಪ್ಪನಾಯಕನನ್ನು ಕೊಂದು ಮಾಗಡಿ ದುರ್ಗವನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿ ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ.

ಇವರ ಕಾಲಾವಧಿಯಲ್ಲಿ ಶೈವ ಮತ್ತು ವೈಷ್ಣವ ದೇವಾಲಯಗಳು ಜೀರ್ಣೋದ್ದಾರಗೊಂಡವು. ಬ್ರಿಟಿಷರ ಆಗಮನದ ನಂತರ ಸಿಡಿಮದ್ದಿನ ಬಳಕೆ ಜಾರಿಗೆ ಬಂದಮೇಲೆ ಮಣ್ಣಿನ ಕೋಟೆಗಳನ್ನು ರಕ್ಷಿಸುವ ಸಲುವಾಗಿ ಸಾವನದುರ್ಗ ಮತ್ತು ಮಾಗಡಿ ಕೋಟೆಗಳ ಹೊರಮೈಗೆ ಇಮ್ಮಡಿ ಕೆಂಪೇಗೌಡ ಕಲ್ಲುಗಳನ್ನು ಕಟ್ಟಿಸಿದ.

ಇಂದಿಗೂ ನಾಯಕನಪಾಳ್ಯದಲ್ಲಿ ಪಾಳೇಗಾರರ ವಂಶದ ಕುಡಿಗಳು ಜನಸಾಮಾನ್ಯರಂತೆ ಬದುಕುತ್ತಿದ್ದಾರೆ ಎಂದು ಪಾಳೇಗಾರ ವಂಶದ ರಾಜರಂಗಪ್ಪ ನಾಯಕ ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT