ಬುಧವಾರ, ಮಾರ್ಚ್ 29, 2023
28 °C
ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಗೋಡೆ ಕುಸಿದು ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಮೆಣಸಿಗನಹಳ್ಳಿ ಬಳಿಯ ನಾಯಕನ ತಾಂಡ್ಯ ಗ್ರಾಮದಲ್ಲಿ ಗುಡಿಸಲಿನ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಗೌರಿಬಾಯಿ (55) ಮೃತಪಟ್ಟವರು. ಈಕೆ ಗ್ರಾಮದ ಡಾಕುನಾಯ್ಕ ಎಂಬುವರ ಪತ್ನಿ. ಗುಡಿಸಲನ್ನು ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಗೋಡೆ ಇವರ ಮೇಲೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ.

ಗುಡಿಸಲು ಹಾಳಾಗಿದ್ದ ಕಾರಣ ಕಾರ್ಮಿಕರಿಂದ ದುರಸ್ತಿ ಮಾಡಿಸಲಾಗುತ್ತಿತ್ತು. ಮನೆಯಲ್ಲಿದ್ದ ಅವರ ಮೇಲೆ ಗೋಡೆ ಕುಸಿದು ಬಿದ್ದಿದೆ.

ಇಟ್ಟಿಗೆ ಹಾಗೂ ಮಣ್ಣಿನ ರಾಶಿಯಲ್ಲಿ ಸಿಕ್ಕಿಕೊಂಡು ಅವರು ಉಸಿರುಗಟ್ಟಿ ತೀವ್ರವಾಗಿ ಗಾಯಗೊಂಡಿದ್ದರು.

ತಕ್ಷಣ ಇಟ್ಟಿಗೆ, ಮಣ್ಣು ಸರಿಸಿ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕಳೆದ ಹಲವು ದಿನಗಳಿಂದ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದ ಗುಡಿಸಲಿನ ಗೋಡೆಗಳು ಶಿಥಿಲಗೊಂಡಿದ್ದವು ಎಂದು ತಿಳಿದುಬಂದಿದೆ. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಗ್ರಾಮದಲ್ಲಿ ಸೋಮವಾರ ಅಂತ್ಯಸಂಸ್ಕಾರ ನಡೆಸಲಾಯಿತು.

ಸೂಕ್ತ ಪರಿಹಾರಕ್ಕೆ ಒತ್ತಾಯ: ಈಚೆಗೆ ಸುರಿದ ಭಾರಿ ಮಳೆಯಿಂದ ಗುಡಿಸಲಿನ ಗೋಡೆಯು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಇಂತಹ ದುರ್ಘಟನೆ ನಡೆದಿದೆ. ಮೃತ ಗೌರಿಬಾಯಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಲಂಬಾಣಿ ಸಮುದಾಯದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರನಾಯ್ಕ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.