ಶನಿವಾರ, ಆಗಸ್ಟ್ 20, 2022
21 °C
ದಣಿವರಿಯದ ಬದುಕಿಗೆ ನಮನ

ಇಂದು ಪತ್ರಿಕಾ ವಿತರಕರ ದಿನ: ಎಂದೂ ತಪ್ಪಿಲ್ಲ ಇವರ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಂದು ಪತ್ರಿಕಾ ವಿತರಕರ ದಿನ. ಕೋವಿಡ್‌ ಲಾಕ್‌ಡೌನ್‌ನ ಸಂಕಷ್ಟದ ಕಾಲದಲ್ಲೂ ಎದೆಗುಂದದೇ ಮನೆಮನೆಗೆ ನಿತ್ಯ ‌ತಪ್ಪದೇ ಪತ್ರಿಕೆ ತಲುಪಿಸಿದ್ದು ಇದೇ ವಿತರಕರು. ಇವರ ಈ ಪರಿಶ್ರಮ ಯಾವ ಕೊರೊನಾ ಸೇನಾನಿಗಳಿಗೂ ಕಡಿಮೆ ಇಲ್ಲ.

ಬಿಸಿಲಿರಲಿ, ಚಳಿ-ಮಳೆಯೇ ಇರಲಿ ಪತ್ರಿಕೆ ವಿತರಣೆ ಕಾರ್ಯ ಮಾತ್ರ ನಿಲ್ಲುವುದಿಲ್ಲ. ಲಾಕ್‌ಡೌನ್‌ನ ದಿನಗಳಲ್ಲಿ ಉಳಿದ ಕ್ಷೇತ್ರಗಳ ಜನರು ಎದುರಿಸಿದಂತೆ ನಮ್ಮ ಪತ್ರಿಕಾ ವಿತರಕರೂ ಅನೇಕ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಪ್ರತಿ ಮನೆಗೆ ಪತ್ರಿಕೆ ತಲುಪಿಸುವ ಅವರ ಕಾಯಕ ನಿತ್ಯ ನಿರಂತರವಾಗಿದೆ. ಕೊರೊನಾ ಭೀತಿಯಲ್ಲಿ ಅವರು ಎದುರಿಸಿದ ಸಮಸ್ಯೆ, ತೆಗೆದುಕೊಂಡ ಕ್ರಮಗಳ ಕುರಿತು ಅವರೇ ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವ್ಯವಹಾರ ಮೀರಿದ ಸೇವೆ
ಪತ್ರಿಕೆ ವಿತರಣೆ ಕಾರ್ಯ ಹಣಕಾಸಿನ ವ್ಯವಹಾರವನ್ನೂ ಮೀರಿದ ಸೇವೆ. 1972ರಿಂದ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೋವಿಡ್‌ನ ಆರಂಭದ ದಿನಗಳಲ್ಲಿ ನಮ್ಮಲ್ಲಿಯೇ ಸಾಕಷ್ಟು ಮಕ್ಕಳು ಹೆದರಿದ್ದರು. ಅವರನ್ನು ಹುರಿದುಂಬಿಸಿ ಕರೆತಂದು ಪತ್ರಿಕೆ ಹಾಕಿಸಿದ್ದೇನೆ. ಪತ್ರಿಕೆ ಹಾಕುವುದರಿಂದ ನಾವು ಬೆಳಿಗ್ಗೆಯೇ ಸೈಕಲ್‌ ತುಳಿದು, ಒಳ್ಳೆಯ ಗಾಳಿ ಸೇವಿಸುವ ಕಾರಣ ಆರೋಗ್ಯವೂ ಉತ್ತಮವಾಗಿರುತ್ತದೆ. ಹೀಗಾಗಿ ನಾವು ಕೋವಿಡ್‌ ಅನ್ನು ಹಿಂದಿಕ್ಕಿ ಕೆಲಸ ಮಾಡಿದ್ದೇವೆ. ನಮ್ಮ ಹುಡುಗರು ಭಯವಿಲ್ಲದೇ ಮಾಸ್ಕ್‌, ಸ್ಯಾನಿಟೈಸರ್‍ ಹಾಕಿಕೊಂಡು ಪತ್ರಿಕೆ ಹಂಚುತ್ತಿದ್ದಾರೆ. ಕೋವಿಡ್‌ ಆರಂಭದ ದಿನಗಳಲ್ಲಿ ಪತ್ರಿಕೆಗಳ ಬಗ್ಗೆ ಕೆಲವು ಸುಳ್ಳು ಸುದ್ದಿ ಹಬ್ಬಿ ಜನರು ಹಿಂದೇಟು ಹಾಕಿದ್ದರು. ಇಂದು ಆ ತಪ್ಪುಕಲ್ಪನೆ ಬದಲಾಗಿದೆ. ಮರಳಿ ಪತ್ರಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಓದುಗರ ಈ ಔದಾರ್ಯ ಹೀಗೆಯೇ ಮುಂದುವರಿಯಲಿದೆ.
-ಶಿವಮಾದು, ಚನ್ನಪಟ್ಟಣ

ನಿರಂತರ ಕಾಯಕ
ನಮ್ಮದು ಒಂದು ದಿನಕ್ಕೂ ನಿಲ್ಲಿಸುವ ಕೆಲಸ ಇಲ್ಲ. ಇವತ್ತಿನವರೆಗೂ ಆ ಕೆಲಸ ನಿಲ್ಲಿಸಿಲ್ಲ. ಇದನ್ನು ದೇವರ ಸೇವೆ ಎಂದು ತಿಳಿದು ಮಾಡುತ್ತಿದ್ದೇವೆ. ಮುಂಜಾನೆ 3 ಗಂಟೆಗೆ ಎದ್ದು ಹೊರಟರೆ ಕೆಲಸ ಮುಗಿಸಿ ಬರುವ ಹೊತ್ತಿಗೆ ಬೆಳಗ್ಗೆ 10 ಗಂಟೆ ಆಗಿರುತ್ತದೆ. ಕೋವಿಡ್ ಸಮಯದಲ್ಲಿ ಪತ್ರಿಕೆ ವಿತರಕರು ಕೊಂಚ ಕಷ್ಟ ಎದುರಿಸಿದ್ದೇ ಜಾಸ್ತಿ. ಮಕ್ಕಳನ್ನು ಪತ್ರಿಕೆ ವಿತರಣೆಗೆ ಕಳುಹಿಸುತ್ತಿಲ್ಲ. ನಾವೇ ಹೋಗುತ್ತಿದ್ದೇವೆ. ಆರಂಭದ ದಿನಗಳಲ್ಲಿ ತಪ್ಪುಕಲ್ಪನೆಯಿಂದಾಗಿ ಕೆಲವರು ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಈಗ ಅವರಿಗೆ ಯಾವುದು ಸತ್ಯ ಎಂದು ಮನವರಿಕೆ ಆಗಿದೆ. ಶುಲ್ಕ ಸಂಗ್ರಹಣೆ ಸಹ ಕಡಿಮೆ ಆಗಿದೆ. ಆದರೆ ಈ ಎಲ್ಲವನ್ನೂ ಮೀರಿ ಪತ್ರಿಕೆ ತಲುಪಿಸುತ್ತಿದ್ದೇವೆ. ನಮಗೆ ಓದುಗರ ವಿಶ್ವಾಸ ಮುಖ್ಯ. ಪತ್ರಿಕೆ ವಿತರಕರಿಗೂ ಆರೋಗ್ಯ, ಜೀವ ವಿಮೆ ಮೊದಲಾದ ಸೌಲಭ್ಯಗಳು ದೊರೆತರೆ ಅನುಕೂಲ.
ಶ್ರೀಧರ್‌, ಮಾಗಡಿ

ಸವಾಲಿನ ನಡುವೆ ಕೆಲಸ
ಯಾವುದೇ ಪರಿಸ್ಥಿತಿ ಇರಲಿ, ಪತ್ರಿಕೆ ವಿತರಣೆಯು ಎಂದಿಗೂ ನಿಲ್ಲದ ಕಾಯಕ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಮನೆಮನೆಗೆ ಪತ್ರಿಕೆ ತಲುಪಿಸುವುದು ನಮಗೂ ಸವಾಲು. ಕೋವಿಡ್‌ ಕಾರಣಕ್ಕೆ ನಾವಿದ್ದ ಪ್ರದೇಶವೇ ಸೀಲ್‌ಡೌನ್‌ ಆಗಿತ್ತು.

ಆಗ ಒಂದಿಷ್ಟು ದಿನ ವ್ಯತ್ಯಾಸ ಆಗಿದ್ದು ಬಿಟ್ಟರೆ ಉಳಿದೆಲ್ಲ ಅವಧಿಯಲ್ಲೂ ಸಕಾಲಕ್ಕೆ ಜನರಿಗೆ ಪತ್ರಿಕೆ ತಲುಪಿಸಿದ್ದೇವೆ. ಪತ್ರಿಕೆ ಹಾಕಲು ಹುಡುಗರ ಕೊರತೆ ಇದ್ದು, ನಾವೇ ಹೆಚ್ಚು ಸಮಯ ದುಡಿಯುತ್ತೇವೆ. ಜೊತೆಗೆ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಶುಲ್ಕ ಸಂಗ್ರಹಣೆಯ ಕೆಲಸ ಇದ್ದೇ ಇರುತ್ತದೆ. ಜನರು ಸಕಾಲಕ್ಕೆ ಶುಲ್ಕ ಕೊಟ್ಟರೆ ಅದೇ ನಮಗೆ ಸಮಾಧಾನ. ಇದರಿಂದ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯ ಆಗುತ್ತದೆ.
ನರಸಿಂಹಮೂರ್ತಿ, ಕನಕಪುರ

ಕೊರೊನಾ ಸೇನಾನಿಗಳು
ಕೋವಿಡ್‌ನ ಈ ಕಾಲದಲ್ಲಿ ನಾವೂ ಕೊರೊನಾ ವಾರಿಯರ್ಸ್‌‌ಗಳ ರೀತಿಯಲ್ಲೇ ಸೇವೆ ಸಲ್ಲಿಸುತ್ತಿದ್ದೇವೆ. ಏನೇ ಲಾಕ್‌ಡೌನ್‌ ಆಗಿರಲಿ, ಮಳೆ-ಚಳಿಯೇ ಇರಲಿ, ಪತ್ರಿಕೆ ವಿತರಣೆ ಕಾರ್ಯ ಮಾತ್ರ ಎಂದಿಗೂ ನಿಂತಿಲ್ಲ.

ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಬಳಸಿಕೊಂಡೇ ಪತ್ರಿಕೆಯನ್ನು ಓದುಗರ ಮನೆಯಂಗಳಕ್ಕೆ ತಲುಪಿಸಿದ್ದೇವೆ.

ಲಾಕ್‌ಡೌನ್‌ ಕಾರಣಕ್ಕೆ ಪತ್ರಿಕಾ ವಿತರಕರು ಅನೇಕ ಸವಾಲು ಎದುರಿಸಿದ್ದೇವೆ. ಜನರ ಮನೆಬಾಗಿಲಿಗೆ ಹೋಗಿ ಶುಲ್ಕ ಸಂಗ್ರಹಣೆ ಮಾಡುವುದು ಸಮಸ್ಯೆ ಆಗಿತ್ತು. ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ.

ಈ ಎಲ್ಲ ಸವಾಲುಗಳ ನಡುವೆಯೂ ಪತ್ರಿಕೆ ವಿತರಣೆ ಕಾರ್ಯ ಖುಷಿ ಕೊಟ್ಟಿದೆ. ಇದು ಕೇವಲ ಒಂದು ವ್ಯವಹಾರ ಅಲ್ಲ, ಸೇವೆ ಎಂಬುದು ನಮ್ಮ ಭಾವನೆ.
ಎ.ಆರ್‌. ತ್ರಿಮೂರ್ತಿ, ರಾಮನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು