ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಎಂ ಆಡಳಿತ ಮಂಡಳಿಯಿಂದ ನಿರಂತರ ಶೋಷಣೆ: ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ

ಟಿಕೆಎಂ ಆಡಳಿತ ಮಂಡಳಿಯಿಂದ ನಿರಂತರ ಶೋಷಣೆ; ನೌಕರರ ಆರೋಪ
Last Updated 25 ನವೆಂಬರ್ 2020, 13:14 IST
ಅಕ್ಷರ ಗಾತ್ರ

ರಾಮನಗರ: 'ಟೊಯೊಟಾ ಕಾರ್ಖಾನೆ ವಿವಾದ ಬಗೆಹರಿಸಲು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಮಧ್ಯಪ್ರವೇಶ ಮಾಡಬೇಕು' ಎಂದು ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ನೌಕರರ ಸಂಘವು ಒತ್ತಾಯಿಸಿದೆ.

"ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಕಂಪನಿಯು ಎರಡನೇ ಬಾರಿಗೆ ಕಾರ್ಖಾನೆಯನ್ನು ಲಾಕ್‌ಔಟ್‌ ಮಾಡಿದೆ. ಆದರೆ ತನ್ನ ಷರತ್ತಿಗೆ ಒಪ್ಪಿ ಬರುವವರಿಗೆ ಕೆಲಸ ನೀಡುತ್ತಿದೆ. ಈ ಇಬ್ಬಗೆಯ ನೀತಿಯು ಕಾನೂನುಬಾಹಿರವಾಗಿದೆ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲು ನಾವು ಸಿದ್ಧರಿದ್ದೇವೆ. ಆದರೆ ಆಡಳಿತ ಮಂಡಳಿಯೇ ಆಸಕ್ತಿ ತೋರುತ್ತಿಲ್ಲ' ಎಂದು ನೌಕರರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‍ ಚಕ್ಕೆರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

'ಕಳೆದ ಮೂರ್ನಾಲ್ಕು ವರ್ಷದಿಂದ ಕಂಪನಿಯು "ಟಿಕೆಎಂ ವರ್ಕಿಂಗ್‌ ಸಿಸ್ಟಂ' ಹೆಸರಿನಲ್ಲಿ ಕಾರ್ಮಿಕರನ್ನು ಶೋಷಿಸುತ್ತಿದೆ. ದಿನಕ್ಕೆ ಸುಮಾರು 10 ಗಂಟೆ ಕಾರ್ಮಿಕರು ಕಾರ್ಖಾನೆಯಲ್ಲೇ ಕಳೆಯುತ್ತಿದ್ದಾರೆ. ಹೀಗಿದ್ದೂ ಶೌಚಕ್ಕೂ ಸಮಯ ನೀಡದಂತೆ ದುಡಿಸಿಕೊಳ್ಳಲಾಗುತ್ತಿದೆ. ಜಪಾನ್‌ ಮಾದರಿ ವ್ಯವಸ್ಥೆಯನ್ನೇ ಇಲ್ಲಿ ಜಾರಿಗೆ ತಂದಿದ್ದು, ಕಾರ್ಮಿಕರಿಗೆ ಮಿಲಿ ಸೆಕೆಂಡುಗಳ ಲೆಕ್ಕದಲ್ಲಿ ಗುರಿ ನಿಗದಿಪಡಿಸಲಾಗಿದೆ. ನಿಗದಿತ ಸಮಯದೊಳಗೆ ಕೆಲಸ ಮುಗಿಸದವರಿಗೆ ವೇತನ ಕಡಿತದ ಶಿಕ್ಷೆ ನೀಡಲಾಗುತ್ತಿದೆ' ಎಂದು ಆರೋಪಿಸಿದರು.

ಕಾರ್ಖಾನೆಯು ನವ ಜೀವನ ಎಂಬ ಹೆಸರಿನಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈಗಾಗಲೇ 800 ನೌಕರರಿಗೆ ಹೀಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ. 35-40 ವರ್ಷ ಮೇಲ್ಪಟ್ಟ, ಅಧಿಕ ವೇತನ ಇರುವ ನೌಕರರನ್ನು ಗುರುತಿಸಿ ಅವರಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ' ಎಂದು ಹೇಳಿದರು. "2022ರಲ್ಲಿ ಟೊಯೊಟಾ-ಹಾಗೂ ಸುಜುಕಿ ಜಂಟಿಯಾಗಿ ಉತ್ಪಾದನೆ ಆರಂಭಿಸಲು ಒಪ್ಪಂದ ಮಾಡಿಕೊಂಡಿವೆ. ಅಷ್ಟರೊಳಗೆ ಇಲ್ಲಿನ ಕಾಯಂ ನೌಕರರ ಪೈಕಿ ಶೇ 60-70 ಮಂದಿಯನ್ನು ಮನೆಗೆ ಕಳುಹಿಸಲು ಕಂಪನಿ ಸಿದ್ಧತೆ ನಡೆಸಿದೆ' ಎಂದು ದೂರಿದರು.

"ಈ ಎಲ್ಲ ಸಮಸ್ಯೆಗಳನ್ನು ಎರಡು ವರ್ಷದಿಂದ ಕಾರ್ಮಿಕ ಇಲಾಖೆ ಗಮನಕ್ಕೆ ತಂದಿದ್ದರೂ ಸರ್ಕಾರ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಸದ್ಯ ಅಮಾನತುಗೊಂಡಿರುವ 40 ನೌಕರರನ್ನು ಸೇವೆಗೆ ವಾಪಸ್‌ ಪಡೆಯುವುದೂ ಸೇರಿದಂತೆ ನಮ್ಮ ಬೇಡಿಕೆ ಈಡೇರಿಸುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ಸರ್ಕಾರವೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು' ಎಂದು ಆಗ್ರಹಿಸಿದರು.

ಸಂಘದ ಕಾನೂನು ಸಲಹೆಗಾರ ಮುರಳೀಧರ್‍, ಪದಾಧಿಕಾರಿಗಳಾದ ಗಂಗಾಧರ್‌, ಬಸವರಾಜು ಹವಾಲ್ದಾರ್‌, ಪ್ರದೀಪ್‌, ವೀರೇಶ್‌, ದೀಪಕ್‌, ಪ್ರಕಾಶ್‌, ಉಮೇಶ್‌ ಆಲೂರು, ಕಾರ್ಮಿಕ ಮುಖಂಡ ಪಿ.ಜೆ. ಸತೀಶ್‌ ಇದ್ದರು.

******

ಜಪಾನಿ ವ್ಯವಸ್ಥೆಯನ್ನು ಇಲ್ಲಿ ಕಾರ್ಯಗತಗೊಳಿಸುವ ಹುನ್ನಾರ ನಡೆದಿದೆ. ಕಳೆದೆರಡು ವರ್ಷದಿಂದ ಕಾರ್ಮಿಕರ ಶೋಷಣೆ ನಿರಂತರವಾಗಿದೆ
-ಪ್ರಸನ್ನಕುಮಾರ್‍ ಚಕ್ಕೆರೆ
ಅಧ್ಯಕ್ಷ, ಟಿಕೆಎಂ ಕಾರ್ಮಿಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT