ಭಾನುವಾರ, ಸೆಪ್ಟೆಂಬರ್ 19, 2021
30 °C

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ; ಮೇಕೆದಾಟಿಗೆ ಪ್ರವಾಸಿಗರ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕೊರೊನಾ ಮೂರನೇ ಅಲೆ ಪ್ರಾರಂಭವಾಗುತ್ತಿದ್ದು, ಜನರು ಅದರ ಭಯದಲ್ಲಿರುವಾಗಲೇ ತಾಲ್ಲೂಕಿನ ಪ್ರವಾಸಿ ತಾಣವಾದ ಸಂಗಮ ಮತ್ತು ಮೇಕೆದಾಟುವಿನಲ್ಲಿ ಮಾರ್ಗಸೂಚಿಯನ್ನು ಗಾಳಿಗೆ ತೂರಿ ನೂರಾರು ಪ್ರವಾಸಿಗರು ಭಾನುವಾರ ನದಿ ನೀರಿನಲ್ಲಿ ಇಳಿದು ಈಜಾಡುತ್ತಿದ್ದು ಕಂಡುಬಂದಿತು.

ಹಲವು ದಿನಗಳಿಂದ ಕೊರೊನಾ ಲಾಕ್‌ಡೌನ್‌ ಕಾರಣದಿಂದ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಜನರಿಗೆ ನಿರ್ಬಂಧ ವಿಧಿಸಲಾಗಿತ್ತು. ಹಲವು ತಿಂಗಳಿನಿಂದ ಸಂಗಮ ಪ್ರವೇಶಕ್ಕೆ ಪ್ರವಾಸಿಗರಿಗೆ ತಡೆ ಮಾಡಲಾಗಿತ್ತು. ಅರಣ್ಯ ಅಧಿಕಾರಿಗಳು ಪ್ರವೇಶ ದ್ವಾರದಲ್ಲೇ ತಡೆದು ವಾಪಸ್ ಕಳುಹಿಸುತ್ತಿದ್ದರು. ಸ್ಥಳೀಯ ವ್ಯಕ್ತಿಗಳಿಗೂ ಅವಕಾಶ ನಿರಾಕರಿಸಲಾಗಿತ್ತು.

ಬೆಳಿಗ್ಗೆ ಇದ್ದಕ್ಕಿದ್ದಂತೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸಂಗಮ, ಮೇಕೆದಾಟಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂದಿತು. ಈ ವೇಳೆ ಯಾವುದೇ ಕೊರೊನಾ ನಿಯಮಗಳು ಪಾಲನೆ ಆಗಿಲ್ಲವೆಂದು ತಿಳಿದುಬಂದಿದೆ.  

ಪ್ರವಾಸಿಗರು ಕೊರೊನಾ ಮಾರ್ಗಸೂಚಿ ಬಗ್ಗೆ ಸಂಪೂರ್ಣ ಮೈ ಮರೆಯುತ್ತಿರುವುದು ಕೊರೊನಾ ಬಗ್ಗೆ ಇದ್ದ ಭಯ ದೂರವಾದಂತೆ ಕಾಣುತ್ತಿದೆ. ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯು ಕೊರೊನಾದಂತಹ ಕಠಿಣ ಪರಿಸ್ಥಿತಿ ಮುಕ್ತಾಯವಾಗುವುದಕ್ಕೂ ಮುಂಚೆ ನಿರ್ಲಕ್ಷ್ಯ ತಾಳಿರುವುದೇ ಸಂಗಮ ಮತ್ತು ಮೇಕೆದಾಟುವಿನಲ್ಲಿ ಪ್ರವಾಸಿಗರು ಸೇರಲು ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪ.

ಜನರು ಒಂದೆಡೆ ಸೇರಿದರೆ ಕೊರೊನಾ ಸುಲಭವಾಗಿ ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದರೂ ಪ್ರವಾಸಿ ತಾಣದಂತೆ ಧಾರ್ಮಿಕ ಕೇಂದ್ರಗಳಲ್ಲೂ ಭಾನುವಾರ ಭೀಮನ ಅಮವಾಸ್ಯೆ ಪೂಜೆಗೆ ಜನರ ನೂಕುನುಗ್ಗಲು ಉಂಟಾಗಿತ್ತು. 

ತಾಲ್ಲೂಕಿನ ಶಕ್ತಿ ದೇವತೆಯಾಗಿರುವ ಕಬ್ಬಾಳಿನ ಕಬ್ಬಾಳಮ್ಮ ದೇವಾಲಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಮತ್ತು ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಈ ವೇಳೆ ಕೊರೊನಾದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಕಬ್ಬಾಳಮ್ಮ ದೇವಾಲಯ ‘ಎ’ ಗ್ರೇಡ್‌ ದೇವಾಲಯವಾಗಿದ್ದು, ಇದಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗವಿದ್ದರೂ ಯಾವುದೇ ಅಗತ್ಯ ಕ್ರಮ ಕೈಗೊಂಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.