ಬಿಡದಿ: ಕೈಗಾರಿಕಾ ಕಾಶಿಯಾದ ಬಿಡದಿ ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಡೆಗೂ ಸೆ. 19ಕ್ಕೆ ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನವು ಬಿಸಿಎಂ (ಎ) ಮಹಿಳಾ ವರ್ಗಕ್ಕೆ ಮೀಸಲಾಗಿದೆ. ಎರಡು ವರ್ಷದ ಬಳಿಕ ಚುನಾವಣೆ ಘೋಷಣೆಯಾಗಿದ್ದು, ಮೀಸಲಾತಿ ಹೊರಬಿದ್ದಾಗಿನಿಂದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಪುರಸಭೆಯ ಸದಸ್ಯರ ಬಲ 23. ಇದರಲ್ಲಿ ಜೆಡಿಎಸ್ 14 ಮತ್ತು ಕಾಂಗ್ರೆಸ್‌ನ 9 ಸದಸ್ಯರಿದ್ದಾರೆ. ಬಿಜೆಪಿ ಇಲ್ಲಿ ಖಾತೆಯನ್ನೇ ತೆರೆದಿಲ್ಲ. ಬಿಡದಿಯು ರಾಮನಗರ ತಾಲ್ಲೂಕು ವ್ಯಾಪ್ತಿಗೆ ಸೇರಿದರೂ, ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಸದ್ಯ ಕ್ಷೇತ್ರವನ್ನು ಕಾಂಗ್ರೆಸ್‌ನ ಎಚ್.ಸಿ. ಬಾಲಕೃಷ್ಣ ಪ್ರತಿನಿಧಿಸುತ್ತಿದ್ದಾರೆ.
ಜೆಡಿಎಸ್‌ಗೆ ಪ್ರತಿಷ್ಠೆ ಪ್ರಶ್ನೆ: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ವಾಸವಾಗಿರುವ ಕೇತಗಾನಹಳ್ಳಿಯ ತೋಟದ ಮನೆ ಸಹ ಪುರಸಭೆಯ ವಾರ್ಡ್ 7ರ ವ್ಯಾಪ್ತಿಗೆ ಬರುತ್ತದೆ ಎಂಬುದು ಗಮನಾರ್ಹ. ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷರು ಆಗಿರುವ ಮಾಗಡಿಯ ಮಾಜಿ ಶಾಸಕ ಎ. ಮಂಜುನಾಥ್ ಕೂಡ ವಾರ್ಡ್ 9ರ ನಿವಾಸಿಯಾಗಿದ್ದು, ಅಧ್ಯಕ್ಷಗಿರಿ ಪಕ್ಷದ ಕೈ ತಪ್ಪದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಅವರದ್ದು. ಈ ಚುನಾವಣೆ ಜೆಡಿಎಸ್‌ಗೆ ಭಾರೀ ಪ್ರತಿಷ್ಠೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್‌ನಿಂದ ಗೆದ್ದಿರುವ ಪರಿಶಿಷ್ಟ ಸಮುದಾಯದ ಸದಸ್ಯರಾದ ವಾರ್ಡ್ 11ರ ಹರಿಪ್ರಸಾದ್, 20ರ ಯಲ್ಲಮ್ಮ ಹಾಗೂ 22ರ ಹರಿಪ್ರಿಯಾ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ 2ರ ಮನು ಲೋಕೇಶ್, 3ನೇ ವಾರ್ಡ್ ಸದಸ್ಯೆ ಮಂಜುಳಾ ಗೋವಿಂದಪ್ಪ ಹಾಗೂ 10ನೇ ವಾರ್ಡ್ ಸದಸ್ಯೆ ಆಯೇಷಾ ಖಲೀಲ್ ಆಕಾಂಕ್ಷಿಗಳಾಗಿದ್ದಾರೆ.
ಆಕಾಂಕ್ಷಿಗಳ ಕಸರತ್ತು: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಈಗಾಗಲೇ ತಮ್ಮ ಪಕ್ಷದ ಮುಖಂಡರು ಹಾಗೂ ನಾಯಕರ ಮನೆಬಾಗಿಲಿಗೆ ಎಡತಾಕುತ್ತಾ, ಅವರ ಕೃಪ ಕಟಾಕ್ಷಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಇತರ ಸದಸ್ಯರನ್ನು ಸಹ ತಮ್ಮ ಪರವಾಗಿ ಮುಖಂಡರ ಬಳಿ ಬ್ಯಾಟಿಂಗ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.
ಸಂಖ್ಯಾಬಲದ ದೃಷ್ಟಿಯಿಂದ ನೋಡಿದರೆ ಎರಡೂ ಸ್ಥಾನಗಳು ಸುಲಭವಾಗಿ ಜೆಡಿಎಸ್‌ಗೆ ತೆಕ್ಕೆಗೆ ಬರಲಿವೆ. ಚುನಾವಣೆಯಲ್ಲಿ 23 ಸದಸ್ಯರ ಜೊತೆಗೆ ಸ್ಥಳೀಯ ಶಾಸಕ ಹಾಗೂ ಸಂಸದರಿಗೂ ಮತ ಚಲಾವಣೆ ಹಕ್ಕು ಇರುವುದರಿಂದ ಮತಗಳ ಸಂಖ್ಯೆ 25ಕ್ಕೆ ಏರಿಕೆಯಾಗುತ್ತದೆ. ಚುನಾವಣೆಯಲ್ಲಿ ಯಾರು ಹೆಚ್ಚು ಮತ ಪಡೆಯುತ್ತಾರೊ ಅವರು ಗದ್ದುಗೆ ಹಿಡಿಯಲಿದ್ದಾರೆ.
‘ನಾವು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಎ. ಮಂಜುನಾಥ್ ಅವರು ಯಾರ ಹೆಸರನ್ನು ಸೂಚಿಸುತ್ತಾರೊ ಅವರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲಿದ್ದು, ನಾವೆಲ್ಲರೂ ಅವರಿಗೇ ಮತ ಹಾಕುತ್ತೇವೆ’ ಎಂದು ಜೆಡಿಎಸ್ ಸದಸ್ಯ ದೇವರಾಜು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಅಧಿಕಾರ ಹಂಚಿಕೆ ತಂತ್ರ?
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜೆಡಿಎಸ್‌ನಲ್ಲಿ ತಲಾ ಮೂವರು ಆಕಾಂಕ್ಷಿಗಳಿದ್ದಾರೆ. 30 ತಿಂಗಳ ಅಧಿಕಾರಾವಧಿಯನ್ನು ತಲಾ ಹತ್ತು ತಿಂಗಳಂತೆ ಮೂವರು ಆಕಾಂಕ್ಷಿಗಳಿಗೂ ಹಂಚಿಕೆ ಮಾಡುವ ಆಲೋಚನೆಯೂ ಪಕ್ಷದ ಮುಖಂಡರಲ್ಲಿದೆ. ಕೆಲ ಹಿರಿಯ ಸದಸ್ಯರು ಸಹ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರ ಹಂಚಿಕೆ ತಂತ್ರ ಅನುಸರಿಸಿ ಈಗಲೇ ಅಧಿಕಾರದ ಭರವಸೆ ನೀಡಿದರೆ ಸದಸ್ಯರು ಬಂಡಾಯ ಏಳುವ ಅಥವಾ ಕಾಂಗ್ರೆಸ್‌ನತ್ತ ಹೋಗುವುದನ್ನು ತಡೆಯಬಹುದಾಗಿದೆ ಎನ್ನುತ್ತವೆ ಪಕ್ಷದ ಮೂಲಗಳು.
- ಕಾದು ನೋಡುತ್ತಿರುವ ‘ಕೈ
’ ಪುರಸಭೆಯಲ್ಲಿ ಕಾಂಗ್ರೆಸ್ ಬಲ ಕೇವಲ 9 ಸ್ಥಾನಗಳಾದರೂ ರಾಜಕೀಯ ಬೆಳವಣಿಗೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಜೆಡಿಎಸ್ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಚುನಾವಣೆಯಲ್ಲಿ ತನ್ನ ಪಕ್ಷದ ಸದಸ್ಯರನ್ನು ಜೆಡಿಎಸ್ ಮುಖಂಡರು ಹೇಗೆ ನಿಭಾಯಿಸಿ ಹಿಡಿದಿಟ್ಟುಕೊಳ್ಳುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ನಡೆಯು ನಿಂತಿದೆ. ಈ ನಿಟ್ಟಿನಲ್ಲಿ ಜೆಡಿಎಸ್‌ನೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಕಾದು ನೋಡುವ ತಂತ್ರವನ್ನು ‘ಕೈ’ ಅನುಸರಿಸುತ್ತಿದೆ. ಕಡೆ ಗಳಿಗೆಯಲ್ಲಿ ಉಭಯ ಪಕ್ಷಗಳಲ್ಲಿರುವ ಸದಸ್ಯರನ್ನು ಪರಸ್ಪರ ಸೆಳೆದು ‘ಪ್ರವಾಸ’ಕ್ಕೆ ಕರೆದೊಯ್ದು ಚುನಾವಣೆ ಸಮಯಕ್ಕೆ ಮತದಾನಕ್ಕೆ ಕರೆತರುವ ರಾಜಕಾರಣ ನಡೆದರೂ ಆಶ್ಚರ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.