ಹಾರೋಹಳ್ಳಿ: ತಾಲೂಕಿನ ಬಿಳಿಕಲ್ ರಂಗಸ್ವಾಮಿ ಬೆಟ್ಟದಲ್ಲಿ ಸೂರ್ಯಾಸ್ತವನ್ನು ಸೂರ್ಯಾಸ್ತ ಕಣ್ತುಂಬಿಕೊಳ್ಳುವುದೇ ರೋಮಾಂಚನವಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಬೆಂಗಳೂರಿನಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಾಲಯವಿದೆ.
ಬೃಹತ್ ಗ್ರಾನೈಟ್ ಬಂಡೆಯು ದೇವಾಲಯಕ್ಕೆ ಅಡಿಪಾಯವಾಗಿದೆ. ಇಲ್ಲಿನ ಪ್ರಕೃತಿಯ ಮುಂಜಾವಿನ ಪ್ರಶಾಂತತೆ ಸವಿಯಲು ಜಿಲ್ಲೆ ಮತ್ತು ಬೆಂಗಳೂರಿನಿಂದ ಪ್ರವಾಸಿಗರು ಆಗಮಿಸುತ್ತಾರೆ. ನಿಸರ್ಗ ಮಡಿಲಲ್ಲಿ ಕುಳಿತು ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡುವುದೇ ಚೆಂದ.
ನಗರದ ಜಂಜಾಟದಿಂದ ಪಾರಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಬೆಟ್ಟ ಅದ್ಭತ ತಾಣವಾಗಿದೆ.
ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟ ಸುಮಾರು 3,780 ಅಡಿ ಎತ್ತರದಲ್ಲಿದೆ. ಬಿಳಿಕಲ್ ರಂಗಸ್ವಾಮಿ ಬೆಟ್ಟವು ಅರಣ್ಯ ಮೀಸಲು ಪ್ರದೇಶಕ್ಕೆ ಸೇರಿದೆ.
ಪೊದೆಸಸ್ಯ–ಕುರುಚಲು ಗಿಡಗಳಿಂದ ಕೂಡಿರುವ ಬೆಟ್ಟವು ಆನೆ ಸೇರಿದಂತೆ ಹಲವು ವನ್ಯಜೀವಿ ಪ್ರಾಣಿಗಳಿಗೆ ಆಶ್ರಯ ನೀಡಿದೆ. ಸಮೃದ್ಧ ಸಸ್ಯವರ್ಗ ಎತ್ತರವಾದ ಬೆಟ್ಟಗಳ ವಿಶಿಷ್ಟವಾಗಿದೆ. ವಿಶೇಷವಾಗಿ ಮಳೆಗಾಲದ ನಂತರ ಇಲ್ಲಿನ ಸಸ್ಯವರ್ಗವು ಸಾಕಷ್ಟು ದಟ್ಟವಾಗಿರುತ್ತದೆ. ಈ ಕಾಡುಗಳು ಸ್ಥಳೀಯವಾಗಿರುವ ವನ್ಯಜೀವಿಗಳಿಗೆ ಮತ್ತು ಪಕ್ಕದ ಕಾಡುಗಳಿಂದ ಬರುವ ಆನೆಗಳಿಗೆ ಆಶ್ರಯ ನೀಡಿದೆ.
ಬೆಟ್ಟದ ಮೇಲಿರುವ ಪುಟ್ಟ ರಂಗಸ್ವಾಮಿ ದೇವಾಲಯಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಬೆಟ್ಟದ ಮೇಲ್ಭಾಗದಲ್ಲಿ ವರ್ಷಕ್ಕೊಮ್ಮೆ ಜನವರಿ 14 ರಂದು ರಂಗನಾಥ ಸ್ವಾಮಿಯ ಉತ್ಸವ ನಡೆಸಲಾಗುತ್ತದೆ.
ಬೆಟ್ಟಕ್ಕೆ ಚಾರಣ ಹೋಗಬಯಸುವವರು ಕನಕಪುರದ ಮಾರ್ಗವಾಗಿ ಬರಬಹುದು.
ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ: ಬೆಂಗಳೂರಿಗೆ ಸಮೀಪದಲ್ಲಿರುವ ನೂರಾರು ಎಕರೆ ಭೂ ಪ್ರದೇಶದ ಬಿಳಿಕಲ್ ರಂಗಸ್ವಾಮಿ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.
ದೇವಸ್ಥಾನಕ್ಕೆ ಬರುವವರಿಗೆ ಅವಕಾಶ ಕಲ್ಪಿಸಿ
ಅರಣ್ಯ ಬೆಳೆಸಿ ಪರಿಸರ ಉಳಿಸಬೇಕು. ಜನರ ಆರೋಗ್ಯ ಕಾಪಾಡಬೇಕು. ಮರಗಳನ್ನು ಬೆಳೆಸಬೇಕು ಎಂಬುದು ನಮ್ಮ ಧ್ಯೇಯವಾಗಿದೆ. ಕಳೆದ 5 ತಿಂಗಳಿಂದ ಬೆಟ್ಟದ ಮೇಲೆ ದೇವರಿಗೆ ಪೂಜೆ ಮಾಡಲು ಬಿಡುತ್ತಿಲ್ಲ. ಅರಣ್ಯ ಇಲಾಖೆಯವರು ಆನೆಗಳ ಹಾವಳಿ ಹೆಚ್ಚಾಗಿದ್ದು ಯಾವುದೇ ಕಾರಣಕ್ಕೂ ಮೇಲೆ ಹೋಗಬೇಡಿ ಎಂದು ಹೇಳಿವರು ಬಹಳಷ್ಟು ಪ್ರವಾಸಿಗರು ಪ್ರತಿದಿನ ಬಂದು ಹಿಂದಕ್ಕೆ ಹೋಗುತ್ತಿದ್ದಾರೆ. ಕನಿಷ್ಠ ಪಕ್ಷ ಸರ್ಕಾರ ದೇವಸ್ಥಾನದ ಬಗ್ಗೆ ಗಮನಹರಿಸಿ ಪ್ರವಾಸಿಗರಿಗೆ ಅನುಕೂಲ ಮಾಡಬೇಕು ಕೃಷ್ಣಮೂರ್ತಿ ಬಿಳಿಕಲ್ ರಂಗಸ್ವಾಮಿ ದೇವಸ್ಥಾನದ ಅರ್ಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.