ಶುಕ್ರವಾರ, ಜುಲೈ 1, 2022
22 °C
ಲಾಕ್‌ಡೌನ್‌ನಿಂದ ಕನಿಷ್ಠ ಬೆಲೆ ಸಿಗದೆ ರೈತರ ಬದುಕು ಅತಂತ್ರ

ಕನಕಪುರ: ರೇಷ್ಮೆ ಉದ್ಯಮದ ಮೇಲೆ ಕರಿನೆರಳು

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕೊರೊನಾ ಲಾಕ್‌ಡೌನ್‌ ರೇಷ್ಮೆ ಉದ್ಯಮದ ಮೇಲೆ ಕರಿನೆರಳು ಬೀರಿದ್ದು ರೇಷ್ಮೆಯನ್ನೇ ನಂಬಿದ್ದ ಎಲ್ಲರ ಬದುಕು ಬೀದಿಗೆ ಬಿದ್ದಂತಾಗಿದೆ. ರೇಷ್ಮೆಯನ್ನೇ ನೆಚ್ಚಿಕೊಂಡಿದ್ದ ರೈತ ಅತಂತ್ರನಾಗಿದ್ದಾನೆ.

ರೇಷ್ಮೆ ನಗರಿ ಎನಿಸಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯಲ್ಲಿ ಸಿಂಹಪಾಲು ಹೊಂದಿರುವಂತ ಕನಕಪುರ ತಾಲ್ಲೂಕಿನಲ್ಲಿ ಎಲ್ಲಾ ರೈತರು ರೇಷ್ಮೆ ಬೆಳೆ ಬೆಳೆಗಾರರಾಗಿದ್ದು, ರೇಷ್ಮೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.

ಮೂರು ತಿಂಗಳ ಹಿಂದೆ ₹500ರ ಗಡಿಯಲ್ಲಿದ್ದ ಕೆ.ಜಿ. ರೇಷ್ಮೆ ಇಂದು ₹250ಕ್ಕೆ ಇಳಿಕೆಯಾಗಿದೆ. ರೇಷ್ಮೆ ಉತ್ಪಾದನೆಯು ಕಡಿಮೆಯಾಗಿದ್ದು 300 ಲಾಟ್‌ ಬರುತ್ತಿದ್ದ ರೇಷ್ಮೆ ಗೂಡು 200 ಲಾಟ್‌ಗೆ ಬಂದು ನಿಂತಿದೆ. ಆದರೂ ರೈತರಿಗೆ ಸಿಗಬೇಕಾದ ಕನಿಷ್ಠ ಬೆಂಬಲ ಬೆಲೆಯು ಸಿಗದೆ ರೈತ ಇಂದು ಕಂಗಲಾಗಿದ್ದಾನೆ.

ರೇಷ್ಮೆ ಗೂಡಿನ ಧಾರಣೆಯು ಕುಸಿತದ ಜತೆ ಜತೆಗೆ ರೇಷ್ಮೆ ಬೆಲೆಯು ಕುಸಿದಿದೆ. ರೇಷ್ಮೆ ಗೂಡು 1 ಕೆ.ಜಿ. ₹500 ಇದ್ದಾಗ ರೇಷ್ಮೆ ಕೆ.ಜಿ. ₹4,500 ಇತ್ತು. ಈಗ ಕೆ.ಜಿ.ಗೂಡು ₹250 ಇದ್ದು ಕೆ.ಜಿ. ರೇಷ್ಮೆಯು ₹2,200ರ ಆಸುಪಾಸಿನಲ್ಲಿದೆ. ರೇಷ್ಮೆ ತೋಟದಿಂದ ರೇಷ್ಮೆ ಸೀರೆ ಮಾರಾಟದವರೆಗೂ ಈ ಉದ್ಯಮವು ಒಂದಕ್ಕೊಂದು ಕೊಂಡಿಯಾಗಿದೆ.

ರೇಷ್ಮೆ ಮಾರುಕಟ್ಟೆ, ರೇಷ್ಮೆ ಬಿಚ್ಚಾಣಿಕೆ, ರೇಷ್ಮೆ ಸೀರೆ ನೇಯುವುದು, ರೇಷ್ಮೆ ಸೀರೆ ವ್ಯಾಪಾರ ಇವೆಲ್ಲವೂ ಸರಾಗವಾಗಿ ನಡೆಯಬೇಕಿದ್ದರೆ, ಮದುವೆ, ಹಬ್ಬ, ಜಾತ್ರೆ, ಶುಭ ಸಮಾರಂಭಗಳು ನಡೆಯಬೇಕು. ಅದೆಲ್ಲದಕ್ಕೂ ಲಾಕ್‌ಡೌನ್‌ನಿಂದ ಬ್ರೇಕ್‌ ಬಿದ್ದಿದೆ. ಆದರೆ ರೈತ ಮಾತ್ರ ರೇಷ್ಮೆ ತೋಟದಲ್ಲಿ ಸೊಪ್ಪು ಬೆಳೆಯುವುದನ್ನು, ರೇಷ್ಮ ಗೂಡು ಬೆಳೆಯುವುದನ್ನು ಮಾತ್ರ ನಿಲ್ಲಿಸಲಾಗದೆ ತನ್ನ ಸಂಕಷ್ಟವನ್ನು ತಾನೇ ಅನುಭಸುತ್ತಿದ್ದಾನೆ.

ಲಾಕ್‌ಡೌನ್‌ ನೇರ ಪರಿಣಾಮ ರೈತನ ಮೇಲೆ ಆಗುತ್ತಿದೆ. ರೈತ ರೇಷ್ಮೆ ಗೂಡು ಬೆಳೆಯಲು ಖರೀದಿ ಮಾಡುವ ರಸಗೊಬ್ಬರ, ಔಷಧಿ, ರೇಷ್ಮೆಹುಳು ಇದೆಲ್ಲವೂ ಕಡಿಮೆಯಾಗಿಲ್ಲ. ಎಲ್ಲಾ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇಷ್ಟೇ ಬೆಲೆ ಎಂದು ಕೊಟ್ಟು ಖರೀದಿಸುವ ರೈತ ತಾನು ಬೆಳೆದ ರೇಷ್ಮೆ ಗೂಡಿಗೆ ಖರ್ಚಿನ ಮೇಲೆ ಇಷ್ಟೇ ಲಾಭಾಂಶ ಬೇಕೆಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿಲ್ಲ.

‘ರೇಷ್ಮೆಗೂಡಿನ ಮಾರುಕಟ್ಟೆಗೆ ಹೋದರೆ ಕರೋನ ಬರುತ್ತದೆ ಎಂಬ ಭಯ. ಮತ್ತೆ ಅಲ್ಲಿಯು ಬೆಲೆ ಕಡಿಮೆ ಆಗಿರುವುದು ಹಾಗೂ ಸರ್ಕಾರದಿಂದ ಯಾವುದೆ ಪ್ರೋತ್ಸಾಹದ ಹಣ ಕೊಡದ ಕಾರಣ ಹಾದಿ ಬೀದಿಯಲ್ಲಿ ರೈತ ತಾನು ಬೆಳೆದ ಗೂಡನ್ನು ಚೌಕಾಶಿಯಲ್ಲಿ ಮಾರಾಟ ಮಾಡುತ್ತಿದ್ದಾನೆ. 1 ಕೆ.ಜಿ.ರೇಷ್ಮೆ ಗೂಡು ಉತ್ಪಾದನೆಗೆ ಕನಿಷ್ಠ ₹300 ಖರ್ಚಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ₹250 ಸಿಗುತ್ತಿಲ್ಲ’ ಎಂಬುದು ರೈತರ ನೋವಾಗಿದೆ.

ಸರ್ಕಾರ ತೋಟಗಾರಿಕೆ ಬೆಳೆಗಾರರಿಗೆ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ಘೋಷಣೆ ಮಾಡಿದೆ. ಆದರೆ ರೇಷ್ಮೆಯನ್ನು ನಂಬಿ ಜೀವಿಸುತ್ತಿದ್ದ ರೇಷ್ಮೆ ಕೃಷಿಕರನ್ನು ಮರೆತಿದೆ. ಈ ಹಿಂದೆ ಕೆ.ಜಿ. ರೇಷ್ಮೆ ಗೂಡಿಗೆ ₹300 ಬೆಂಬಲೆ ಬೆಲೆ ಘೋಷಣೆ ಮಾಡಿತ್ತು. ಇದೀಗ ಅದನ್ನೂ ನಿಲ್ಲಿಸಿದೆ ಎಂದು ರೈತರು ದೂರುತ್ತಾರೆ.

ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಕೆಎಸ್‌ಎಂಬಿಯಿಂದ ರೇಷ್ಮೆ ಖರೀದಿ ಮಾಡಿ ರೀಲರ್ಸ್‌ಗೆ ಬೆಂಬಲವಾಗಿ ನಿಂತಿತ್ತು. ಈ ಬಾರಿ ರೇಷ್ಮೆ ಬೆಲೆಯು ಕುಸಿತವಾಗಿ ರೀಲರ್ಸ್‌ ಸಂಕಷ್ಟದಲ್ಲಿದ್ದರೂ ಕೆಎಸ್‌ಎಂಬಿಯಿಂದ ರೇಷ್ಮೆ ಖರೀದಿಯನ್ನು ಮಾಡದಿರುವುದು ದೊಡ್ಡ ಪೆಟ್ಟಾಗಿದೆ.

ಸರ್ಕಾರವೇ ಪರಿಹಾರ ಸೂಚಿಸಲಿ

ಕೊರೊನಾ ಲಾಕ್‌ಡೌನ್‌ಗಿಂತ ಮುಂಚೆ ರೇಷ್ಮೆ ಗೂಡಿನ ಬೆಲೆ ₹500ರಷ್ಟು ಗರಿಷ್ಠ ಮಟ್ಟ ತಲುಪಿತ್ತು. ಆಗ ರೇಷ್ಮೆ ಗೂಡು ಹೆಚ್ಚಾಗಿ ಬರುತ್ತಿತ್ತು. ಈಗ 1 ಕೆ.ಜಿ. ಗೂಡು ₹200ರಿಂದ ₹250 ರಷ್ಟಿದೆ. ಸರ್ಕಾರ ರೇಷ್ಮೆ ಬೆಲೆ ಕಡಿಮೆಯಾದಾಗ ಬೆಂಬಲ ಬೆಲೆಯಡಿ ಕೆ.ಜಿ.ಗೆ ₹30 ಕೊಡುತ್ತಿತ್ತು. ರೇಷ್ಮೆ ಬೆಲೆ ಕಡಿಮೆಯಾಗಿರುವುದರಿಂದ ರೀಲರ್ಸ್‌ ಸಹ ತೊಂದರೆಯಲ್ಲಿದ್ದಾರೆ. ಸರ್ಕಾರವೇ ಪರಿಹಾರ ಸೂಚಿಸಬೇಕು.

ಚಿಕ್ಕೆಂಪೇಗೌಡ, ರೇಷ್ಮೆಗೂಡಿನ ಮಾರುಕಟ್ಟೆ ಇನ್‌ಸ್ಪೆಕ್ಟರ್‌, ಕನಕಪುರ

ರೀಲರ್ಸ್‌ಗೂ ಹೆಚ್ಚು ನಷ್ಟ

ರೇಷ್ಮೆ ಉದ್ಯಮ ರೇಷ್ಮೆ ಬೆಳೆಯುವ ರೈತ ಮತ್ತು ರೇಷ್ಮೆ ಸೀರೆ ಖರೀದಿದಾರರ ಮೇಲೆ ಅವಲಂಬಿತವಾಗಿದೆ. ಇದು ಒಂದು ಚೈನ್‌ಲಿಂಕ್‌. ಲಾಕ್‌ಡೌನ್‌ನಿಂದ ಎಲ್ಲಾ ಶುಭ ಸಮಾರಂಭಗಳು ಬಂದ್‌ ಆಗಿರುವುದರಿಂದ ರೇಷ್ಮೆ ಸೀರೆಗಳು ವ್ಯಾಪಾರವಾಗದೆ ಸ್ಥಗಿತವಾಗಿವೆ. ಉದ್ಯಮ ನಿಲ್ಲಿಸು
ವುದು ಬೇಡವೆಂದು ಕಷ್ಟಪಟ್ಟು ನಡೆಸುತ್ತಿದ್ದೇವೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು ರೀಲರ್ಸ್‌ಗೆ ನಷ್ಟವಾಗುತ್ತಿದೆ

ಎಂ.ಎನ್‌.ಚಂದ್ರಶೇಖರ್‌, ಅಧ್ಯಕ್ಷ, ಸಿಲ್ಕ್‌ ರೀಲರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌, ಕನಕಪುರ

ಬೆಂಬಲ ಬೆಲೆ ನೀಡಲಿ

ರೇಷ್ಮೆ ಬೆಳಗಾರರ ಕುಟುಂಬ ರೇಷ್ಮೆಯನ್ನು ನಂಬಿ ಜೀವಿಸುತ್ತಿವೆ. ರೇಷ್ಮೆ ಬೆಲೆ ಕಡಿಮೆಯಾಗಿದೆ ಎಂದು ಗಿಡವನ್ನು ಕಿತ್ತು ಬೇಕೆಂದಾಗ ಮತ್ತೆ ಬೆಳೆಸಲು ಸಾಧ್ಯವಿಲ್ಲ. ಲಾಭವಾಗಲಿ ನಷ್ಟವಾಗಲಿ ಅದನ್ನೇ ಬೆಳೆಯಲೇಬೇಕು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವು ರೇಷ್ಮೆ ಬೆಳಗಾರರ ಸಹಕಾರಕ್ಕೆ ಬರಬೇಕು, ಬೆಂಬಲ ಬೆಲೆಯಡಿ ಪ್ರೋತ್ಸಾಹ ಧನ ನೀಡಬೇಕು. ತೋಟಗಾರಿಕೆ ಬೆಳೆಗೆ ಪರಿಹಾರ ನೀಡದಂತೆ ರೇಷ್ಮೆಬೆಳೆಗಾರರಿಗೂ ಪರಿಹಾರ ನೀಡಬೇಕು

ಟಿ.ಬೇಕುಪ್ಪೆ ಶಿವಕುಮಾರ್‌, ರೇಷ್ಮೆ ಬೆಳೆಗಾರ, ಕನಕಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು