ಬುಧವಾರ, ಜುಲೈ 28, 2021
26 °C
ತಿಟ್ಟಮಾರನಹಳ್ಳಿ: ನಾಗರಿಕರ ಬೇಡಿಕೆ ಕುರಿತು ಕೇಂದ್ರ ಸಚಿವರ ಗಮನಕ್ಕೆ

ರಾಮನಗರ | ಅಂಡರ್‌ಪಾಸ್‌ ರಸ್ತೆ ಗಡ್ಕರಿ ಜತೆ ಚರ್ಚೆ: ಎಚ್ ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ ಚನ್ನಪಟ್ಟಣ ಹಾಗೂ ತುಮಕೂರು ಕಡೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಗೆ ಅಂಡರ್ ಪಾಸ್ ರಸ್ತೆ ನಿರ್ಮಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. 

ತಿಟ್ಟಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆಯನ್ನು ಕೂಡಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. 

‘ಈ ಭಾಗದ ಪ್ರಯಾಣಿಕರು ಅಂಡರ್ ಪಾಸ್ ರಸ್ತೆ ನಿರ್ಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಯಾರೂ ಬಿಸಿಲಲ್ಲಿ ಕುಳಿತು ಪ್ರತಿಭಟನೆ ಮಾಡುವುದು ಬೇಡ. ಜನಪ್ರತಿನಿಧಿಯಾಗಿ ಅವರ ಸಮಸ್ಯೆಯನ್ನು ಬಗೆ ಹರಿಸುವ ಜವಾಬ್ದಾರಿ ನನ್ನದಾಗಿದೆ’ ಎಂದು ಹೇಳಿದರು. 

‘ಈಗಾಗಲೇ ಹೆದ್ದಾರಿ ಪ್ರಾಧಿಕಾರದಿಂದ ವಿನ್ಯಾಸ ತಯಾರಿಸಿ ಅನುಮತಿ ಪಡೆದುಕೊಳ್ಳಲಾಗಿದೆ. ಅದರಂತೆ ಕಾಮಗಾರಿ ನಡೆಸುತ್ತಿದ್ದಾರೆ. ಈಗ ಹೊಸದಾಗಿ ವಿನ್ಯಾಸ ಮಾಡಲು ರಾಜ್ಯದಿಂದ ಆಗುವುದಿಲ್ಲ. ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕು. ಹಾಗಾಗಿ ದೆಹಲಿಗೆ ಹೋಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮನವೊಲಿಸುತ್ತೇನೆ. ಯಾವುದೇ ಗೊಂದಲ ಬೇಡ’ ಎಂದರು.

ಕಾಮಗಾರಿ ಸ್ಥಗಿತ: ಕೊರೊನಾ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿರುವುದರಿಂದ ತಾಲ್ಲೂಕಿನಲ್ಲಿ ₹ 3 ಕೋಟಿ ವೆಚ್ಚದ ಹಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ. ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ಹಲವಾರು ವರ್ಷಗಳಿಂದ ಆಗದಿರುವ ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಮಂಜೂರು ಮಾಡಿದ್ದೇನೆ. ಜನತೆ ಕಾಲಾವಕಾಶ ಕೊಡಬೇಕು. ಎಲ್ಲವನ್ನೂ ಸರಿಪಡಿಸುತ್ತೇನೆ ಎಂದರು.

ತಾಲ್ಲೂಕು ಜೆಡಿಎಸ್ ಮುಖಂಡರು, ತಿಟ್ಟಮಾರನಹಳ್ಳಿ ಭಾಗದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಅನುಭವಸ್ಥರು ಅವಶ್ಯಕವಾಗಿದ್ದ ಕಾರಣ ದೇವೇಗೌಡ ಸ್ಪರ್ಧೆ

ರಾಜ್ಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುವವರು ಮತ್ತು ಅನುಭವಸ್ಥರು ರಾಜ್ಯಸಭೆಗೆ ಅವಶ್ಯಕವಾಗಿದ್ದ ಕಾರಣ ಎಚ್.ಡಿ.ದೇವೇಗೌಡ ಅವರನ್ನು ರಾಜ್ಯಸಭೆಗೆ ಕಳುಹಿಸಲು ಒತ್ತಡ ಹಾಕಲಾಯಿತು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಕ್ಷದ ಶಾಸಕರು, ಕಾರ್ಯಕರ್ತರ ಒತ್ತಡ ಹಾಗೂ ದೆಹಲಿಯ ನಾಯಕರುಗಳ ಮಾತಿಗೆ ಬೆಲೆಕೊಟ್ಟು ದೇವೇಗೌಡ ಅವರು ಅನಿವಾರ್ಯವಾಗಿ ರಾಜ್ಯಸಭೆಗೆ ಹೋಗುವ ನಿರ್ಧಾರ ಮಾಡಿದರು ಎಂದು ಕುಮಾರಸ್ವಾಮಿ ತಿಳಿಸಿದರು.

ದೇವೇಗೌಡರಿಗೆ ಅನುಭವ ಇದೆ. ಇಲ್ಲಿ ವಯಸ್ಸಿನ ಪ್ರಶ್ನೆ ಎದುರಾಗುವುದಿಲ್ಲ. ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಹೋಗಿಲ್ಲ. ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಎರಡು ವರ್ಷ ರಾಜ್ಯಸಭೆ ಸದಸ್ಯರಾಗಿದ್ದರು. ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮುಂದೆ ಗಟ್ಟಿ ಧ್ವನಿ ಎತ್ತಬೇಕಿದೆ. ಹಾಗಾಗಿ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ದೇವೇಗೌಡರು ರಾಜ್ಯಸಭೆ ಚುನಾವಣಾ ಸ್ಪರ್ಧೆ ದೇವರ ಇಚ್ಛೆ. ಅವರು ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿಯೇ ಸ್ಪರ್ಧಿಸಲು ಒಪ್ಪಿರಲಿಲ್ಲ. ಆದರೂ, ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ತುಮಕೂರಿನಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಜನ ಸೋಲಿಸಿದರು. ಸೋಲು– ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಹಾಗಂತ ನಾವು ಪಲಾಯನ ಮಾಡಿಲ್ಲ. ಜನರ ನಡುವೆಯೇ ಇದ್ದು ಸೇವೆ ಮಾಡಿದ್ದೇವೆ. ಹೋರಾಟ ಮಾಡಿಕೊಂಡು ಬಂದಿರುವ ಕುಟುಂಬ ನಮ್ಮದು. ಸೋತರೂ ಜನರ ನಡುವೆ ಇರುತ್ತೇವೆ, ಗೆದ್ದಾಗಲೂ ಜನರ ನಡುವೆ ಇರುತ್ತೇವೆ. ತಲೆತಪ್ಪಿಸಿಕೊಂಡು ಹೋಗಲ್ಲ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು