ಮಂಗಳವಾರ, ಏಪ್ರಿಲ್ 20, 2021
27 °C

ಪ್ರಧಾನಿ ರಾಜೀನಾಮೆಗೆ ವಾಟಾಳ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ದೆಹಲಿಯ ಕೆಂಪು ಕೋಟೆಯ ಮೇಲೆ ಮತ್ತೊಂದು ಧ್ವಜ ಹಾರಾಟ ಘಟನೆ ಖಂಡನೀಯ. ಇದು ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯಕ್ಕೆ ಹಿಡಿದ ಕನ್ನಡಿ. ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿ ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಆಗ್ರಹಿಸಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಬುಧವಾರ ಬೆಂಬಲಿಗರೊಡನೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ‘ರೈತರು ಪ್ರಾಮಾಣಿಕವಾಗಿ ಚಳವಳಿ ನಡೆಸುತ್ತಿದ್ದು, ಅವರನ್ನು ದಿಕ್ಕು ತಪ್ಪಿಸುವ ಹುನ್ನಾರ ಅಡಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದವರಿಗೆ ಶಿಕ್ಷೆ ಆಗಬೇಕು’ ಎಂದರು.

‘ರಾಜ್ಯದಲ್ಲಿ ಎಂಇಎಸ್‌ ನಿಷೇಧ ಮತ್ತು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಇದೇ 30ರಂದು ರಾಜ್ಯದಾದ್ಯಂತ ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಚರ್ಚಿಸಲು ಬೆಂಗಳೂರಿನ ಉಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಇದೇ 28ರಂದು ಬೆಳಿಗ್ಗೆ 11ಕ್ಕೆ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ’ ಎಂದು ಅವರು ತಿಳಿಸಿದರು. ‘ಎಂಇಎಸ್ ಎಲ್ಲಿವರೆಗೆ ಬೆಳಗಾವಿಯಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಅನ್ಯಾಯ ತಪ್ಪಿದ್ದಲ್ಲ. ಹೀಗಾಗಿ ಆ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು. ‘

ಬೆಂಗಳೂರಿನಲ್ಲಿ ನಡೆಯುವ ಏರ್‌ಶೋನಲ್ಲಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ. ಕೋವಿಡ್ ಇರುವ ಕಾರಣ ಈ ಪ್ರದರ್ಶನವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ಕರುನಾಡ ಸೇನೆ ಉಪಾಧ್ಯಕ್ಷ ಜಗದೀಶ್‌, ಸಿ.ಎಸ್. ಜಯಕುಮಾರ್ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು