ಸೋಮವಾರ, ನವೆಂಬರ್ 18, 2019
29 °C

ಗೆಲುವು ಕಾಂಗ್ರೆಸ್‌ಗೆ; ಎಚ್‌.ಎಂ. ರೇವಣ್ಣ

Published:
Updated:
Prajavani

ಮಾಗಡಿ: ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ತಿಳಿಸಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಪಟ್ಟಣದ ಅಭಿವೃದ್ದಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಆರ್‌.ಗುಂಡೂರಾವ್‌ ಮತ್ತು ಡಿ.ದೇವರಾಜ ಅರಸು ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಸರಬರಾಜು, ಐಡಿಎಸ್‌ಎಂಟಿ ಲೇಔಟ್‌ ಮಾಡಿ ವಿತರಿಸಿದ್ದು, ಮಾರುಕಟ್ಟೆ, ಪಶುವೈದ್ಯ ಶಾಲೆ ಹೊಸಬಡಾವಣೆ, ಭಾಗ್ಯಜ್ಯೋತಿ, ಮಾಗಡಿ–ಬೆಂಗಳೂರು ರಸ್ತೆ ಅಭಿವೃದ್ಧಿ ನಡೆದಿವೆ. ಅಂದಿನ ಪುರಸಭೆ ಅಧ್ಯಕ್ಷ ಆರ್‌.ರಂಗನಾಥ ಶೆಟ್ಟಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಿದ್ದರು. ಜನಪರ ಕೆಲಸ ಮಾಡಿ, ಮತಕೇಳುತ್ತಿದ್ದೇವೆ. ಮತದಾರರು ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದ್ದು, ಎಚ್‌.ಸಿ.ಬಾಲಕೃಷ್ಣ ನೇತೃತ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಗೆಲುವಿನ ಲಕ್ಷಣಗಳು ಗೋಚರಿಸುತ್ತಿವೆ’ ಎಂದರು.

ಕಾಂಗ್ರೆಸ್‌ ಪಕ್ಷದ ಒಬಿಸಿ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ‘ನೇಕಾರರಿಗೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ನೀಡಲಾಗಿದೆ. ಜಾತಿ ಜನಗಣತಿಯನ್ನು ಸರ್ಕಾರ ಕೂಡಲೆ ಬಿಡುಗಡೆ ಮಾಡಬೇಕು. ಒಬಿಸಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ 6,500 ನೇಕಾರರ ಮಗ್ಗಗಳು ನಾಶವಾಗಿದೆ. ಪ್ರತಿಯೊಬ್ಬ ನೇಕಾರರಿಗೂ ಸರ್ಕಾರ ₹ 25ಸಾವಿರ ಪರಿಹಾರ ಮಂಜೂರು ಮಾಡಿತ್ತು. ಕಂದಾಯ ಸಚಿವ ಆರ್‌.ಅಶೋಕ್‌ ನೇಕಾರರಿಗೆ ನೀಡಬೇಕಾಗಿದ್ದ ಪರಿಹಾರವನ್ನು ತಡೆಹಿಡಿದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನೇಕಾರರಿಗೆ ಪರಿಹಾರ ನೀಡುವಂತೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ’ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ‘ಪಟ್ಟಣದಲ್ಲಿ ನಮ್ಮ ತಾಯಿತಂದೆಯ ಹೆಸರಿನಲ್ಲಿ ನಿವೇಶನ ಖರೀದಿಸಿ ಶಾದಿಮಹಲ್‌ ಕಟ್ಟಡಕ್ಕೆ ಚಾಲನೆ ನೀಡಿದ್ದೇನೆ. ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸಿದ್ದೇನೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿಯ ಅನಾವರಣವಾಗಬೇಕಿದೆ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಉತ್ತಮ ಆಡಳಿತ ನೀಡುತ್ತೇವೆ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಮುಖಂಡ ಇಕ್ಬಾಲ್‌ ಹುಸೇನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗರತ್ನ ಚಂದ್ರೇಗೌಡ, ಎಚ್‌.ಎನ್‌.ಅಶೋಕ್‌, ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ನಿವೃತ್ತ ಅಧಿಕಾರಿ ರಹಮತ್‌ ಉಲ್ಲಾಖಾನ್‌, ಮಹಮದ್‌ ಇನಾಯತ್‌ ಉಲ್ಲಾಖಾನ್‌, ಕಾಂಗ್ರೆಸ್‌ ಮುಖಂಡರಾದ ಕೆ.ಎಚ್‌.ಕೃಷ್ಣಮೂರ್ತಿ, ಸಿ.ಜಯರಾಮು, ದೊಡ್ಡಿಲಕ್ಷ್ಮಣ್‌, ಕಲ್ಪನಾಶಿವಣ್ಣ, ಎಂ.ಆರ್‌.ಬಸವರಾಜು, ಎಂ.ಕೆ.ಧನಂಜಯ, ರಿಯಾಜ್‌ ಇದ್ದರು.

15ನೇ ವಾರ್ಡ್‌ನ ಅಭ್ಯರ್ಥಿ ಕೋಮಲ, ಎಚ್‌.ಪಿ, 16ನೇ ವಾರ್ಡ್‌ನ ಪೂರ್ಣೀಮಮಂಜುನಾಥ್‌,8ನೇ ವಾರ್ಡ್‌ನ ಆಶಾರಾಣಿ.ಕೆ.ಎನ್‌, 1ನೇ ವಾರ್ಡ್‌ನ ಚೈತ್ರ.ಕೆ.ನ್‌, ಮತ್ತು ಇತರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಪ್ರತಿಕ್ರಿಯಿಸಿ (+)