ಶುಕ್ರವಾರ, ನವೆಂಬರ್ 22, 2019
26 °C

ಲಾರಿ ಹರಿದು ಮಹಿಳೆ ದಾರುಣ ಸಾವು

Published:
Updated:

ಕನಕಪುರ: ಕಲ್ಲಿನ ಲಾರಿ ಮಹಿಳೆಯ ಮೇಲೆ ಹರಿದು ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇಲ್ಲಿನ ಮೈಸೂರು ರಸ್ತೆ ಸೂರಿ ಪೆಟ್ರೋಲ್‌ ಬಂಕ್‌ ಬಳಿಯ ಡಿಕೆ ಚಿಕನ್‌ ಸೆಂಟರ್‌ ಮುಂಭಾಗ ಗುರುವಾರ ಘಟನೆ ನಡೆದಿದೆ. ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಮದ ದಿವಂಗತ ಲಿಂಗೇಗೌಡ ಅವರ ಪತ್ನಿ ಸರೋಜಮ್ಮ (41) ಮೃತ ಮಹಿಳೆ. ಲಿಂಗೇಗೌಡ ಅವರು ಕಳೆದ ವರ್ಷ ನಿಧನರಾಗಿದ್ದರು.  ಸರೋಜಮ್ಮ ಅವರಿಗೆ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ.

ಸರೋಜಮ್ಮ ಉಯ್ಯಂಬಳ್ಳಿ ಹೋಬಳಿ ತಾವರಗಟ್ಟೆ ಗ್ರಾಮದವರು. ಇವರನ್ನು ದೊಡ್ಡಮುದುವಾಡಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ತವರು ಮನೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಮಳವಳ್ಳಿ ತಾಲ್ಲೂಕು ಹಾಡ್ಲಿ ಸರ್ಕಲ್‌ಗೆ ಹೋಗಿದ್ದರು. ಬಂಧುಗಳಾದ ತಾವರಗಟ್ಟೆ ಶಿವಣ್ಣ ಎಂಬುವರ ಜತೆಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಸೂರಿ ಪೆಟ್ರೋಲ್‌ ಬಂಕ್‌ ಬಳಿ ಕಲ್ಲಿನ ಲಾರಿ ಹಿಂಬದಿಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಲಾರಿ ಗುದ್ದಿದ ರಭಸಕ್ಕೆ  ಸ್ಕೂಟರ್‌ನಿಂದ ಸರೋಜಮ್ಮ ಬಿದ್ದರು. ಅವರ ದೇಹದ ಮಧ್ಯಭಾಗದ ಮೇಲೆ ಲಾರಿಯ ಎಲ್ಲ ಚಕ್ರಗಳು ಹರಿದು ಸರೋಜಮ್ಮ ದೇಹವು ಎರಡು ತುಂಡುಗಳಾಗಿ ದೇಹ ಛಿದ್ರವಾಗಿದೆ.

ಶಿವಣ್ಣ ಅವರಿಗೂ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಕನಕಪುರ ಟ್ರಾಫಿಕ್‌ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)