ಸೋಮವಾರ, ಸೆಪ್ಟೆಂಬರ್ 16, 2019
23 °C
ಪ್ಯಾನಲ್ ವಕೀಲರು ಮತ್ತು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ

‘ಸಮಾಜದ ನಿರ್ಲಕ್ಷ್ಯದಿಂದ ಜೀತ ಪದ್ಧತಿ ಜೀವಂತ’

Published:
Updated:
Prajavani

ರಾಮನಗರ: ಜೀತ ಕಾರ್ಮಿಕ ಪದ್ಧತಿಯ ಬಗ್ಗೆ ಸಮಾಜ ನಿರ್ಲಕ್ಷ್ಯ ಹೊಂದಿರುವುದರಿಂದಲೇ ಈ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ.ಜಿ. ಉಮಾ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಭಾಂಗಣದಲ್ಲಿ ಪ್ಯಾನಲ್ ವಕೀಲರು ಮತ್ತು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗಾಗಿ 'ಜೀತ ಕಾರ್ಮಿಕರು ಮತ್ತು ಮಾನವ ಕಳ್ಳ ಸಾಗಣಿಕೆ' ಕುರಿತು ಶನಿವಾರ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1975-–-76ರಲ್ಲಿ ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾನೂನು ಜಾರಿಯಾದ ನಂತರ ಈ ಅನಿಷ್ಠ ಪದ್ಧತಿಯಿಂದ ಸಮಾಜ ಮುಕ್ತಿಯಾಗಿದೆ ಅಂತಲೇ ನಾಗರಿಕರಲ್ಲಿ ಭಾವನೆ ಇದೆ. ಆದರೆ ಈ ಘೋರ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ ಎಂದರು.

ಸಂವಿಧಾನದ 123ನೇ ವಿಧಿ ಬಲವಂತ ದುಡಿಮೆ ಮತ್ತು ಭಿಕ್ಷಾಟನೆಯನ್ನು ನಿಷೇಧಿಸಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಉದ್ದೇಶದಿಂದಲೇ ಜೀತ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿ ಕಾನೂನು ಜಾರಿಯಾಗಿದೆ. ಕಾನೂನು ಜಾರಿಯಾಗಿ ಇಷ್ಟು ವರ್ಷಗಳು ಕಳೆದರೂ ಈ ಅನಿಷ್ಟ ಪದ್ಧತಿಯ ಘೋರ ಮುಖ ಇನ್ನು ಇದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಈ ಅನಿಷ್ಠ ಪದ್ಧತಿ ಇನ್ನು ಜೀವಂತವಾಗಿದೆ ಎಂದು ಐಜೆಎಂ ಅಧ್ಯಯನ ತಿಳಿಸಿದೆ. ಇದು ಕಳವಳಕಾರಿಯಾದ ವಿಷಯವಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಇನ್ನೂ ಶೇ 40ರಷ್ಟು ಮಂದಿ ಜೀತ ಪದ್ಧತಿಯಲ್ಲೇ ದುಡಿಯುತ್ತಿದ್ದಾರೆ. ಈ ಪೈಕಿ ಶೇ 92ರಷ್ಟು ಜೀತ ಕಾರ್ಮಿಕರು ಪ.ಜಾತಿ ಮತ್ತು ಪ.ಪಂಗಡಗಳ ಸಮುದಾಯದವರಿದ್ದಾರೆ ಎಂಬ ಅಂಶವನ್ನು ಅಧ್ಯಯನಗಳು ಬಹಿರಂಗ ಪಡಿಸಿವೆ. ಶೇ 44ರಷ್ಟು ಮಂದಿ ಹೊರರಾಜ್ಯಗಳ ಕಾರ್ಮಿಕರಿದ್ದಾರೆ ಎಂದು ತಿಳಿಸಿದರು.

ನಮ್ಮ ನಡುವೆಯೇ ಈ ಅನಿಷ್ಠ ಪದ್ಧತಿ ಇನ್ನು ಜೀವಂತವಾಗಿದೆ. ವಿಶೇಷವಾಗಿ ಇಟ್ಟಿಗೆ ಗೂಡು, ಕಲ್ಲುಗಣಿ, ಕೃಷಿ ಮತ್ತು ಮನೆಗೆಲಸ ದುಡಿಮೆಯಲ್ಲಿ ಈ ಪದ್ಧತಿ ಹೆಚ್ಚಾಗಿದೆ ಎನ್ನಲಾಗಿದೆ. ನಾಗರಿಕರ ಸಹಕಾರವಿದ್ದರೆ ಈ ಪದ್ಧತಿಯನ್ನು ನಿರ್ಮೂಲನೆ ಮಾಡಬಹದು. ವಕೀಲರು ಮತ್ತು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೂ ಈ ಪದ್ಧತಿಯ ಬಗ್ಗೆ ಸಂವೇದನೆಯ ಒಂದು ಸಭೆ ಅಗತ್ಯವಿತ್ತು. ಅದು ಇಂದು ನೆರೆವೇರಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಜೀತ ಪದ್ಧತಿಯ ಮುಖಗಳು ಇಂದು ಬದಲಾಗಿದೆ. ಹೊಸ ರೂಪಗಳಲ್ಲಿ ಈ ಪದ್ಧತಿ ಇನ್ನು ಜೀವಂತವಾಗಿದೆ. ಇದನ್ನು ಪತ್ತೆ ಹಚ್ಚಿ ಅವರನ್ನು ಬಿಡುಗಡೆಗೊಳಿಸಬೇಕಾಗಿದೆ. ಈ ಪದ್ಧತಿಯ ನಿರ್ಮೂಲನೆಗೆ ಕಂದಾಯ ಇಲಾಖೆಯ ಹೊಣೆಯು ಇದ್ದು ಇಲಾಖೆಯ ಅಧಿಕಾರಿಗಳಿಗೂ ಇಂತಹ ಸಂವೇದನಾ ಕಾರ್ಯಾಗಾರದ ಅಗತ್ಯವಿದೆ ಎಂದು ತಿಳಿಸಿದರು.

ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ನ ಸಹ ನಿರ್ದೇಶಕ ವಿಲಿಯಂ ಕ್ರಿಪ್ಟೋಪರ್ 'ಜೀತ ಕಾರ್ಮಿಕ ಪದ್ಧತಿಯ ಪರಿಚಯ, ಬಿಡುಗಡೆ ಮತ್ತು ಇತರೆ ಕಾರ್ಯಕ ವಿಧಾನಗಳು', ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಆರ್. ಸೋಮಶೇಖರ್ 'ಜೀತ ಕಾರ್ಮಿಕ ಪದ್ಧತಿಯ ಬಗ್ಗೆ ಅಭಿಯೋಜನೆ ಹಾಗೂ ಸವಾಲುಗಳು' ಬಗ್ಗೆ ಉಪನ್ಯಾಸ ನೀಡಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಾಸಿದ್ಧಾರಾಧ್ಯ, ಸಿದ್ಧಲಿಂಗಪ್ರಭು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವೆಂಕಟಪ್ಪ, ಐಜೆಎಂ ನಿರ್ದೇಶಕ ಇಂದ್ರಜಿತ್ ಪವಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್.ಕುಲಕರ್ಣಿ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮ ಲಕ್ಷ್ಮಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಿಲನ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಳಿನಾ ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

Post Comments (+)