ಗುರುವಾರ , ಫೆಬ್ರವರಿ 20, 2020
25 °C
ಬಿಸಿಯೂಟ ಅಡುಗೆ ತಯಾರಕರಿಗೆ ಒಂದು ದಿನದ ಕಾರ್ಯಾಗಾರ

ಮಕ್ಕಳಿಗೆ ಊಟ ಬಡಿಸುವ ಪುಣ್ಯದ ಕೆಲಸ: ಸವಿತಾಕುಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಸರ್ಕಾರದಿಂದ ಅಡುಗೆ ಸಾಮಗ್ರಿಗಳು ಬಂದರೂ ಅದನ್ನು ಶುಚಿ ರುಚಿಯಾಗಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಸೌಭಾಗ್ಯ, ಪುಣ್ಯದ ಕೆಲಸ ನಿಮ್ಮದಾಗಿದೆ. ಆ ಕೆಲಸವನ್ನು ಮನಪೂರ್ವಕವಾಗಿ ಮಾಡಿ’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾಕುಮಾರಿ ಹೇಳಿದರು.

ಇಲ್ಲಿನ ದೇಗುಲಮಠದ ಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಸಿಯೂಟ ಅಡುಗೆ ತಯಾರಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ನಿಮ್ಮ ಮನೆಗಳಲ್ಲಿ ಯಾವ ರೀತಿ ಸ್ವಚ್ಛತೆಯನ್ನು ಕಾಪಾಡುತ್ತಿರೋ ಅದೇ ರೀತಿಯಲ್ಲಿ ಶಾಲೆಯಲ್ಲೂ ಸ್ವಚ್ಛತೆ ಕಾಪಾಡಬೇಕು. ತರಕಾರಿಗಳನ್ನು ಅಡುಗೆಗೆ ಬಳಸುವ ಮುನ್ನ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ನಂತರ ಕತ್ತರಿಸಿ ಬಳಸಬೇಕು’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭುಜಬಲಿ ಬಜ್ಜಂ ಮಾತನಾಡಿ, ‘ಅಡುಗೆ ಮಾಡುವಾಗ ತಲೆಕೂದಲು ಬೀಳದಂತೆ ತಲೆಕವಚವನ್ನು ಧರಿಸಬೇಕು. ಬೆಳೆದಿರುವ ಕೈಬೆರಳ ಉಗುರುಗಳನ್ನು ಕತ್ತರಿಸಿ ಕೊಳೆಯಿಲ್ಲದಂತೆ ಸ್ವಚ್ಛಗೊಳಿಸಬೇಕು. ಅಡುಗೆ ಮಾಡುವ ಮುನ್ನ ಚೆನ್ನಾಗಿ ಕೈಯನ್ನು ಶುಚಿಗೊಳಿಸಬೇಕು’ ಎಂದು ತಿಳಿಸಿದರು.

ಅಗ್ನಿ ನಂದಕರಾದ ಸುರೇಶ್‌ ಮತ್ತು ಕಲ್ಲಪ್ಪ ಅಡುಗೆ ಮಾಡುವಾಗ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆಕಸ್ಮಿಕ ಬೆಂಕಿ ತಗುಲಿದಾಗ ಬೆಂಕಿ ಹಾರಿಸುವ ಸಿಲಿಂಡರ್‌ನ್ನು ಯಾವ ರೀತಿ ಬಳಸಬೇಕೆಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸಮೂರ್ತಿ ಮಾತನಾಡಿ, ‘ಪ್ರತಿ ಸರ್ಕಾರಿ ಶಾಲೆಗಳಲ್ಲೂ ಶಾಲಾ ಆವರಣವಿರುತ್ತದೆ. ದಯಮಾಡಿ ಅದರಲ್ಲಿ ನೀವು ತರಕಾರಿ ಸೊಪ್ಪು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ಬೆಳಸಿ ಮಕ್ಕಳಿಗೆ ಕೊಡಿ. ಜತೆಗೆ ನಿಮ್ಮ ಮನೆಗಳಲ್ಲಿ ಬೆಳೆಯುವ ತರಕಾರಿ ಸೊಪ್ಪುಗಳನ್ನು ಶಾಲೆಯ ಮಕ್ಕಳಿಗೆ ಕೊಡಿ. ಅವರು ನಿಮ್ಮ ಮಕ್ಕಳು ಇದ್ದ ಹಾಗೆ; ಅವರನ್ನು ಪ್ರೀತಿಯಿಂದ ಕಾಣಿರಿ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಮಂಜುನಾಥ್‌ ಮಾತನಾಡಿ, ‘40 ವರ್ಷ ವಯೋಮಿತಿ ಒಳಗೆ ಇರುವಂತ ಅಡುಗೆ ತಯಾರಕರಿಗೆ ಸರ್ಕಾರದಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾಸ್‌ಧನ್‌ ಪಿಂಚಣಿ ಯೋಜನೆ ಸಿಗಲಿದೆ. ನಿಮ್ಮ ಉಳಿತಾಯದ ಜತೆಗೆ ಸರ್ಕಾರವು ಹಣ ಸೇರಿಸಿ ನಿಮಗೆ 60 ವಯಸ್ಸಿನ ನಂತರ ಪಿಂಚಣಿ ಕೊಡುತ್ತದೆ. 40 ವರ್ಷದ ಒಳಗಿನ ಎಲ್ಲ ಮಹಿಳೆಯರು ನಿಮ್ಮ ದಾಖಲಾತಿಯನ್ನು ಕೊಟ್ಟು ಯೋಜನೆಯ ಲಾಭ ಪಡೆದುಕೊಳ್ಳಿ’ ಎಂದು ತಿಳಿಸಿದರು.

ಬೆಂಗಳೂರು ಡೇರಿಯ ಅಶೋಕ್‌, ರುದ್ರೇಶ್‌, ಗುಡ್ಡೇಗೌಡ, ಕಾರ್ಮಿಕ ಇಲಾಖೆ ಮಂಜುನಾಥ್‌, ಶಿಕ್ಷಣ ಇಲಾಖೆಯ ಸಿಆರ್‌ಪಿ ಗಳಾದ ಎಸ್‌.ಬಿ.ಗೌಡ, ಜಗದೀಶ್‌, ಆನಂದ, ಸುದರ್ಶನ, ರವಿ, ಕೆ.ಮಂಜುನಾಥ್‌, ಸಂಪನ್ಮೂಲ ವ್ಯಕ್ತಿ ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಪಾಲ್ಗೊಂಡಿದ್ದರು.

ತಾಲ್ಲೂಕಿನ 6 ಹೋಬಳಿಗಳಿಂದ 748 ಅಡುಗೆ ತಯಾರಕ ಮಹಿಳೆಯರು ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧಿಕಾರಗಳ ಜತೆ ಸಂವಾದ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು