ಮಂಗಳವಾರ, ಮೇ 11, 2021
27 °C
ವಡ್ಡರಹಳ್ಳಿ ಚೆಕ್‌ಡ್ಯಾಂ ಕಾಮಗಾರಿಗೆ ಸಂಸದ ಡಿ.ಕೆ. ಸುರೇಶ್‌ ಚಾಲನೆ

ಅರ್ಕಾವತಿಯಲ್ಲಿ ವರ್ಷಪೂರ್ತಿ ನೀರು: ಡಿ.ಕೆ. ಸುರೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರಿನ ಶುದ್ಧೀಕರಿಸಿದ ನೀರು ಸುಗ್ಗನಹಳ್ಳಿ ಬಳಿ ಅರ್ಕಾವತಿ ನದಿಗೆ ಸೇರುವ ಯೋಜನೆ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದ್ದು, ಇದರಿಂದ ನದಿಯಲ್ಲಿ ವರ್ಷ ಪೂರ್ತಿ ನೀರು ಲಭ್ಯ ಇರಲಿದೆ ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಭಾನುವಾರ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಚೆಕ್‍ಡ್ಯಾಂ ಕಂ ಕೆರೆ ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಅರ್ಕಾವತಿ ನದಿಯಲ್ಲಿ ವರ್ಷ ಪೂರ್ತಿ ನೀರು ಹರಿಯುವಂತೆ ಮಾಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟು, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದರು.

ಈ ಯೋಜನೆಯಿಂದ ಈ ಭಾಗದಲ್ಲಿ ಅಂತರ್ಜಲ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ಬಿಡದಿಯ ಬೈರಮಂಗಲ ಕೆರೆ ನೀರನ್ನು ಶುದ್ಧೀಕರಿಸಿ ಬಿಡದಿ, ಹಾರೋಹಳ್ಳಿ, ಕಸಬಾ ಹೋಬಳಿಯ ಹಲವು ಕೆರೆಗಳನ್ನು ತುಂಬಿಸುವ ಯೋಜನೆ ಪ್ರಾರಂಭವಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಮಾಡಲು ಈಗಾಗಲೇ 107 ಗ್ರಾಮಗಳಿಗೆ ಜಲಜೀವನ್ ಮಿಷನ್‌ ಯೋಜನೆಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸಲು ಯೋಜನೆ ಕಾಮಗಾರಿ ನಡೆದಿದೆ ಎಂದರು.

ವಡ್ಡರಹಳ್ಳಿ ಚೆಕ್‍ಡ್ಯಾಂ ಕೆರೆ ತುಂಬಿಸುವ ಯೋಜನೆಯನ್ನು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿಯೇ ಪ್ರಸ್ತಾಪ ಮಾಡಲಾಗಿತ್ತು. ಕೋವಿಡ್ ಕಾರಣಕ್ಕೆ ವಿಳಂಬವಾಯಿತು. ರಾಮನಗರ ಶಾಸಕರು ಯಾವಾಗ ಇಲ್ಲಿಗೆ ಬಂದು ಪೂಜೆ ಮಾಡಿದರೋ ಗೊತ್ತಿಲ್ಲ. ಈ ಬಗ್ಗೆ ನನಗೆ ಅಧಿಕಾರಿಗಳೂ ಮಾಹಿತಿ ನೀಡಲಿಲ್ಲ ಎಂದರು.

ಮಾಜಿ ಶಾಸಕ ಕೆ. ರಾಜು ಮಾತನಾಡಿ, ರೈತನ ಮಗನೆಂದು ಹೇಳಿಕೊಳ್ಳುವ ನಾಯಕರಿಗೆ ಕಣ್ಣೀರು ಸುರಿಸಿ ಜನರನ್ನು ಮರಳು ಮಾಡುವುದನ್ನು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಕೆಲಸ ಮಾಡದೆ ಸುಳ್ಳು ಹೇಳಿಕೊಂಡು ಬೂಟಾಟಿಕೆ ಪ್ರದರ್ಶಿಸುತ್ತಾ ನಾಟಕವಾಡಿದರೆ ಜನರು ಹೆಚ್ಚು ದಿನ ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ. ಗಿರಿಗೌಡ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್. ರಾಜು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್. ಅಶೋಕ್, ಮಾಜಿ ಅಧ್ಯಕ್ಷ ಕೆ. ರಮೇಶ್, ಕೈಲಾಂಚ ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ, ಹುಲಿಕೆರೆ-ಗುನ್ನೂರು ಗ್ರಾ.ಪಂ. ಅಧ್ಯಕ್ಷೆ ತೇಜಾ, ಗ್ರಾಪಂ ಸದಸ್ಯರಾದ ವಿ.ರಮೇಶ್, ದಾಸೇಗೌಡ, ನಾಗೇಂದ್ರ, ಮಹದೇವಯ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು