ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಜಲಾವೃತ– ಆರೋಗ್ಯ ಸೇವೆಗೆ ಸಮಸ್ಯೆ

Last Updated 21 ಅಕ್ಟೋಬರ್ 2017, 9:12 IST
ಅಕ್ಷರ ಗಾತ್ರ

ಕನಕಪುರ: ಕೆರೆಯಲ್ಲಿ ನಿರ್ಮಾಣ ಮಾಡಿದ್ದ ಆಸ್ಪತ್ರೆಯು ಜಲಾವೃತಗೊಂಡಿದ್ದರಿಂದ ಕೋಟ್ಯಂತರ ರೂಪಾಯಿಯ ಪೀಠೋಪಕರಣ, ರೋಗಿಗಳಿಗೆ ನೀಡುವ ಔಷಧಿಗಳು 10 ದಿನಗಳಾದರೂ ಆಸ್ಪತ್ರೆಯಲ್ಲಿಯೇ ಹಾಳಾಗುತ್ತಿವೆ. ಅಲ್ಲದೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ಇಲ್ಲದಂತಾಗಿದೆ. ತಾಲ್ಲೂಕಿನ ಹಾರೋಹಳ್ಳಿಯ ಚಿಕ್ಕಕೆರೆಯಲ್ಲಿ ಆರೋಗ್ಯ ಇಲಾಖೆಯು ನಿರ್ಮಾಣ ಮಾಡಿದ್ದ ₹1.2 ಕೋಟಿ ವೆಚ್ಚದ ಆಸ್ಪತ್ರೆ ಇಂತಹ ಅವ್ಯವಸ್ಥೆಗೆ ಸಿಲುಕಿದೆ.

ಸುಮಾರು 4 ವರ್ಷಗಳ ಹಿಂದೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೊಳ್ಳದೆ ನನೆಗುದಿಗೆ ಬಿದ್ದಿದ್ದರಿಂದ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಹಾರೋಹಳ್ಳಿಯ ಹಳೆಯ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ಕಳಪೆ ಗುಣಮಟ್ಟದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡಿದ್ದರಿಂದ ನೆಲಹಾಸು ಸಂಪೂರ್ಣ ಹಾಳಾಗಿ ಗುಂಡಿಯಾಗಿತ್ತು. ಆರೋಗ್ಯ ಇಲಾಖೆಯ ಕೋರಿಕೆಯ ಮೇರೆಗೆ ಕಳೆದ ಒಂದು ವರ್ಷದಲ್ಲಿ ನೆಲಕ್ಕೆ ಗ್ರಾನೈಟ್‌ ಹಾಕಿಸುವ ಕಾಮಗಾರಿ ನಡೆಸಿದ್ದು ಇನ್ನೂ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಮಳೆಯಿಂದ ಕೆರೆಯಲ್ಲಿ ನೀರು ತುಂಬಿಕೊಂಡು ಆಸ್ಪತ್ರೆಯ ಕಟ್ಟಡವು 3–5 ಅಡಿಗಳಷ್ಟು ನೀರಿನಿಂದ ಮುಚ್ಚಿದ್ದು, ಜಲಾವೃತಗೊಂಡಿತ್ತು. ರಾತ್ರೋ ರಾತ್ರಿ ನೀರು ತುಂಬಿದ್ದರಿಂದ ಗಾಬರಿಗೊಂಡು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹೊರಕ್ಕೆ ಬಂದು ಆಸ್ಪತ್ರೆಗೆ ಬೀಗ ಹಾಕಿದ್ದರು.

ಆಸ್ಪತ್ರೆ ಜಲಾವೃತಗೊಂಡಾಗ ಆರೋಗ್ಯ ಇಲಾಖೆಯ ಡಿ.ಎಚ್‌.ಒ. ಮತ್ತು ಟಿ.ಎಚ್‌.ಒ. ಸ್ಥಳಕ್ಕೆ ಭೇಟಿ ನಿಡಿ ಕೆರೆಯಲ್ಲಿ ನೀರು ಖಾಲಿ ಮಾಡಿಸಿ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿ ತಾತ್ಕಾಲಿಕವಾಗಿ ಬಸ್‌ ನಿಲ್ದಾಣ ಪಕ್ಕದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸುವಂತೆ ವೈದ್ಯರಿಗೆ ತಿಳಿಸಿದ್ದರು.

ತಹಶೀಲ್ದಾರ್‌ ಮತ್ತು ಇ.ಒ. ಅವರು ಕೆರೆಯ ವಸ್ತುಸ್ಥಿತಿಯನ್ನು ಗಮನಿಸಿ ನೀರನ್ನು ಹೊರಕ್ಕೆ ಬಿಡುವ ಪ್ರಯತ್ನ ಮಾಡಿ ಕೋಡಿಯನ್ನು ಒಡೆದು ನೀರು ಹೊರಹೋಗುವಂತೆ ಮಾಡಿದ್ದರು. ಒಂದು ಅಡಿಯಷ್ಟು ನೀರು ಖಾಲಿಯಾಗಿಲ್ಲ. 10 ದಿನಗಳಾದರೂ ಆಸ್ಪತ್ರೆಯ ಕಟ್ಟಡ ನೀರಿನಿಂದ ತೆರವಾಗದೆ ಜಲಾವೃತವಾಗಿದೆ. ಆಸ್ಪತ್ರೆಯಲ್ಲಿನ ವಸ್ತುಗಳು ಅಲ್ಲೇ ಉಳಿದಿವೆ. ನೀರನ್ನು ದಾಟಿ ಆಸ್ಪತ್ರೆಗೆ ಹೋಗಬೇಕಿದೆ.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸರ್ಕಾರಿ ಶಾಲೆಯ 4 ಕೊಠಡಿಗಳನ್ನು ಪಡೆದು ಒಂದರಲ್ಲಿ ಲ್ಯಾಬ್‌, ಕಣ್ಣು ಮತ್ತು ಪ್ರಾಥಮಿಕ ಚಿಕಿತ್ಸೆ, ಮತ್ತೊಂದರಲ್ಲಿ ಮಹಿಳಾ ಒ.ಪಿ.ಡಿ. ಮತ್ತೊಂದರಲ್ಲಿ ಪುರುಷ ಒ.ಪಿ.ಡಿ, ಇನ್ನೊಂದರಲ್ಲಿ ಔಷಧಿ ಮತ್ತು ಚುಚ್ಚುಮದ್ದು ಕೊಡುತ್ತಿದ್ದಾರೆ.

ಕನಿಷ್ಠ ಸವಲತ್ತುಗಳಿಲ್ಲದೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಹೆಚ್ಚಿನ ಆರೋಗ್ಯ ತೊಂದರೆ ಇದ್ದವರು, ಗರ್ಭಣಿಯರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಕನಕಪುರ ಅಥವಾ ಬೆಂಗಳೂರಿಗೆ ಹೋಗಬೇಕಿದೆ.

ಕೋಟ್ಯಂತರ ರೂಪಾಯಿಯ ಆಧುನಿಕ ಯಂತ್ರೋಪಕರಣ, ಸಲಕರಣೆಗಳಿದ್ದರೂ ಆಸ್ಪತ್ರೆಯ ಸಮಸ್ಯೆ ಪರಿಹಾರ ಆಗುವವರೆಗೂ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿವೆ.
ಹಾರೋಹಳ್ಳಿ ಗ್ರಾಮ ಪಂಚಾಯಿತಿ, ತಾಲ್ಲೂಕು ಅಡಳಿತ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಇತ್ತಕಡೆ ಗಮನ ಹರಿಸಿ ಶೀಘ್ರವೇ ಕೆರೆಯಿಂದ ನೀರು ಖಾಲಿ ಮಾಡಿಸಬೇಕು ಅಥವಾ ಆಸ್ಪತ್ರೆಗೆ ನೀರು ಹೋಗದಂತೆ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಆರೋಗ್ಯಸೇವೆ ಭಾಗ್ಯ ದೊರೆಕಿಸಬೇಕೆಂದು ಹಾರೋಹಳ್ಳಿ ಜನತೆ ಒತ್ತಾಯಿಸಿದ್ದಾರೆ.

ಶಾಲೆ ಪ್ರಾರಂಭಗೊಂಡ ಮೇಲೆ ಇಲ್ಲಿಂದಲೂ ಖಾಲಿ ಮಾಡಬೇಕು. ಇಲ್ಲಿ ಜಾಗ ಮತ್ತು ಅಗತ್ಯ ಸವಲತ್ತುಗಳಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಘು ಗೋಕುಲೆ ತಿಳಿಸಿದ್ದಾರೆ.

ಆಸ್ಪತ್ರೆಯ ಸುತ್ತಲೂ ನೀರು ಕಡಿಮೆಯಾದ ತಕ್ಷಣ ಇಲಾಖೆಯ ಎಂಜಿನಿಯರ್‌ ಅವರಿಂದ ತಪಾಸಣೆ ಮಾಡಿಸಿ ವರದಿ ಪಡೆದು ವಿದ್ಯುತ್‌ ಸಂಪರ್ಕ ಕೊಡಿಸಿ ಕಾರ್ಯಾರಂಭ ಮಾಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕುಮಾರ್‌ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT