ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಗೆ ರೈತ ಸಾವು

ರಸ್ತೆ ತಡೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Last Updated 25 ಅಕ್ಟೋಬರ್ 2014, 8:53 IST
ಅಕ್ಷರ ಗಾತ್ರ

ಮಾಗಡಿ: ಕಾಡಾನೆಗಳ ದಾಳಿಗೆ ಸಿಲುಕಿ ರೈತನೊಬ್ಬ ಮೃತಪಟ್ಟಿರುವ  ಘಟನೆ ಶುಕ್ರವಾರ ಬೆಳಿಗ್ಗೆ 6.30ರ ಸಮಯದಲ್ಲಿ ತಗಚ ಕುಪ್ಪೆಯ ಬಳಿ ಗಂಗುಚ್ಚಯ್ಯನ ಹೊಲದಲ್ಲಿ ನಡೆದಿದೆ. ಮೃತಪಟ್ಟ ರೈತನನ್ನು ಚಿಕ್ಕತೊರೆ ಪಾಳ್ಯದ ಲಂಬಾಣಿ ತಾಂಡ್ಯಾದ ರಾಜೇಂದ್ರ ನಾಯ್ಕ(49) ಎಂದು ಗುರುತಿಸಲಾಗಿದೆ.

ರಾಜೇಂದ್ರ ನಾಯ್ಕ ಜೊತೆಗೆ ತಗಚಕುಪ್ಪೆ ನರಸಿಂಹಯ್ಯ ಇತರರು ಗುರುವಾರ ರಾತ್ರಿ ಹೊಲ ಕಾಯಲು ಹೋಗಿದ್ದರು. ಶುಕ್ರವಾರ ಮುಂಜಾನೆ. ಮಂಜು ಮುಸುಕಿದ ವಾತಾವರ­ಣ­ವಿತ್ತು. ಈ ಸಂದರ್ಭದಲ್ಲಿ ನಾಲ್ಕು ಕಾಡಾನೆಗಳು ತೋಟದತ್ತ ನುಗ್ಗಿವೆ. ಕಾಡಾನೆಗಳನ್ನು ಕಂಡ ರೈತ ನರಸಿಂ­ಹಯ್ಯ ಓಡಿ ಹೋಗಿ ಕಲ್ಲುಬಂ­ಡೆಯ ಮರೆಯಲ್ಲಿ ಅವಿತು ಕೊಂಡಿದ್ದಾರೆ.

‘ಕಾಡಾನೆಗಳು ಬಂದದ್ದನ್ನು ಕಂಡು ಗಾಬರಿಯಾದ ರಾಜೇಂದ್ರ ನಾಯ್ಕ ಇತರೆ ರೈತರಿಗೆ ಸುದ್ದಿ ಮುಟ್ಟಿಸಲು ತಮಟೆ ಬಡಿದರು. ಗಿಡಗಳ ಪೊದೆ ಇರುವ ಗುಡ್ಡದ ಮೇಲೆ ತಪ್ಪಿಸಿಕೊಳ್ಳಲು ಓಡಿದರು. ಆದರೆ, ತಮಟೆ ಸದ್ದಿಗೆ ಬೆದರಿ  ಸಿಟ್ಟಿಗೆದ್ದ ಕಾಡಾನೆಯೊಂದು  ಹಿಂದಿನಿಂದ ಬಂದು, ಅನಾಮತ್ತಾಗಿ ತನ್ನ ಸೊಂಡಿಲಿನಿಂದ ರಾಜೇಂದ್ರ ನಾಯ್ಕನನ್ನು ಎತ್ತಿ ತಿರುಗಿಸುತ್ತಾ ಗುಡ್ಡದ ಮೇಲಿಂದ 300 ಅಡಿ ದೂರ  ಗುಡ್ಡದ ಕೆಳಗೆ ತೊಗರಿ ಹೊಲದಲ್ಲಿ ಎಸೆಯಿತು. ಆನೆ ಎಸೆದ ಬಿರುಸಿಗೆ ಸ್ಥಳದಲ್ಲೇ ಮೃತಪಟ್ಟರು’ ಎಂದು ಪ್ರತ್ಯಕ್ಷದರ್ಶಿ ರೈತ ನರಸಿಂಹಯ್ಯ ಘಟನೆಯನ್ನು ವಿವರಿಸಿದರು.

ಶವ ಇಟ್ಟು ಪ್ರತಿಭಟನೆ: ಕಾಡಾನೆಯ ದಾಳಿಗೆ ಸಿಲುಕಿ ಮೃತಪಟ್ಟ ರೈತನ ಶವವನ್ನು ಗಂಗುಚ್ಚಯ್ಯನ ಹೊಲದಿಂದ ತೆಗೆಯದೆ, ಮೃತನ ಬಂದುಗಳು ಪ್ರತಿಭಟಿಸಿದರು. ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಆಗ್ರಹಿಸಿ­ದರು. ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಕೆ.ಎನ್‌.ಕೆಂಪರಾಜು ಅವರನ್ನು ವಾಚಾಮಗೋಚರವಾಗಿ ನಿಂದಿಸಿದರು. ಪೊಲೀಸರ ಸಮ್ಮುಖದಲ್ಲಿಯೆ ಆರ್‌ಎಫ್‌ಓ ಮೇಲೆ ಹಲ್ಲೆಗೆ ಯತ್ನಿಸಿದರು. ಶಾಸಕ ಎಚ್‌.ಸಿ.ಬಾಲಕೃಷ್ಣ ಬಂದಿದ್ದರಿಂದ ಅನಾಹುತ ತಪ್ಪಿತು. ಎಸಿಎಫ್‌, ಕೆ. ಲಿಂಗಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ರಸ್ತೆ ತಡೆ: ಕಾಡಾನೆಯ ದಾಳಿಗೆ ಸಿಲುಕಿ ರೈತನೊಬ್ಬ ಮೃತಪಟ್ಟಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು, ಬಾಚೇನ ಹಟ್ಟಿ ಗ್ರಾ.ಪಂ.ವ್ಯಾಪ್ತಿಯ ಗೊಲ್ಲರ ಪಾಳ್ಯ, ತಗಚ ಕುಪ್ಪೆ, ಚಿಕ್ಕತೊರೆ ಪಾಳ್ಯದ ಲಂಬಾಣಿ ತಾಂಡ್ಯಾ, ರಾಮನಾಥ ಪುರ, ದುಡುಪನ ಹಳ್ಳಿ, ಭಂಟರಕುಪ್ಪೆ, ಬಾಚೇನ ಹಟ್ಟಿ ಸುತ್ತಮುತ್ತಲಿನ ರೈತರು ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿದರು. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಗಚ ಕುಪ್ಪೆಯ ಬಳಿ ಮಾಗಡಿ– ಬೆಂಗಳೂರು ರಸ್ತೆಯನ್ನು ಎರಡು ಗಂಟೆಯ ವರೆಗೆ ಅಡ್ಡಗಟ್ಟಿ ರಸ್ತೆ ನಡೆಸಿ, ಅರಣ್ಯ ಇಲಾಖೆಯ ಹಿರಿಯ  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು. ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪುಂಡಾನೆಗಳ ಉಪಟಳವನ್ನು ತಡೆಗಟ್ಟುವಂತೆ ಆಗ್ರಹಿಸಿದರು.

ಪರದಾಟ: ರಸ್ತೆ ತಡೆಯಿಂದ ದೀಪಾವಳಿ ಹಬ್ಬಕ್ಕೆಂದು ಮಾಗಡಿ ಮಾರ್ಗವಾಗಿ ಕುಣಿಗಲ್‌, ನಾಗಮಂಗಲ, ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡ ಬೇಕಾಯಿತು. ರಸ್ತೆ ತಡೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್‌.ಸಿ.ಬಾಲಕೃಷ್ಣ ರೈತರ ಮನವೊಲಿಸಿ ರಸ್ತೆ ತಡೆ ತೆರವು ಗೊಳಿಸಿದರು. ಮಾಗಡಿ–ಬೆಂಗಳೂರು ರಸ್ತೆಯಲ್ಲಿ 3 ಕಿ.ಮಿ. ವರೆಗೆ ನೂರಾರು ವಾಹನಗಳು 2 ಗಂಟೆಯವರೆಗೆ ನಿಂತಿದ್ದವು.

ಭೇಟಿ: ಕಾಡಾನೆ ದಾಳಿಯಿಂದ ಮೃತಪಟ್ಟ ರೈತನ ಶವ ಬಿದ್ದಿದ್ದ ಹೊಲಕ್ಕೆ ಶಾಸಕ ಎಚ್‌.ಸಿ.ಬಾಲಕೃಷ್ಣ, ಜಿ.ಪಂ. ಸದಸ್ಯರಾದ ವಿಜಯ ಕುಮಾರ್‌, ಮುದ್ದುರಾಜ್‌ ಯಾದವ್‌, ತಾ.ಪಂ.ಸದಸ್ಯೆ ತೇಜಶ್ವಿನಿ ಮುದ್ದಹನುಮೇಗೌಡ, ಬಾಚೇನ ಹಟ್ಟಿ ಗ್ರಾ.ಪಂ.ಅಧ್ಯಕ್ಷ ರಂಗನಾಥ್‌ ಮತ್ತಿತರರು ಭೇಟಿ ನೀಡಿ ಕಾಡಾನೆಗಳ ಉಪಟಳವನ್ನು  ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಶಾಸಕರಿಗೆ ಆಗ್ರಹಿಸಿದರು.

ತರಾಟೆ: ಅರಣ್ಯ ಇಲಾಖೆ ಅಧಿಕಾರಿ­ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರೈತರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದರು.

ಮೃತ ರೈತನ ವಾರಸುದಾರರಿಗೆ  ಶಾಸಕರು ಸ್ಥಳದಲ್ಲಿಯೇ ಧನಸಹಾಯ ಮಾಡಿದರು. ಇನ್ನೂ ಮೂರು ದಿನಗಳ ಒಳಗೆ ಉನ್ನತ ಅಧಿಕಾರಿಗಳ ಸಭೆಯನ್ನು ತಗಚಕುಪ್ಪೆಯಲ್ಲಿ ಕರೆದು ಪುಂಡಾನೆಗಳ ಉಪಟಳ ನಿಯಂತ್ರಿಸಲು ಕ್ರಮಕೈಗೊ­ಳ್ಳುವುದಾಗಿ ಭರವಸೆ ನೀಡಿದ ಮೇಲೆ ಶವವನ್ನು ಅಂತ್ಯಕ್ರಿಯೆಗೆ ಕೊಂಡೊ­ಯ್ದರು.

ಪರಿಹಾರ: ಕಾಡಾನೆಯ ದಾಳಿಗೆ ಸಿಲುಕಿ ಮೃತಪಟ್ಟಿರುವ ರೈತ ರಾಜೇಂದ್ರ ನಾಯ್ಕನ  ಶವ ಸಂಸ್ಕಾರಕ್ಕೆ ₨5 ಸಾವಿರ ನೀಡಿದ್ದೇವೆ. ಕುಟುಂಬದವರಿಗೆ ಇನ್ನು ಮೂರು ದಿನಗಳ ಒಳಗಾಗಿ ₨5ಲಕ್ಷದ ಚೆಕ್‌ ಅನ್ನು ಶಾಸಕ ಎಚ್‌.ಸಿ.ಬಾಲಕೃಷ್ಣ ಅವರ ಸಮ್ಮುಖದಲ್ಲಿ ನೀಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಕೆ.ಎನ್‌.ಕೆಂಪರಾಜು ಅವರು ತಿಳಿಸಿದರು.

ಕಾಡಾನೆಗಳಿಗೆ 8 ರೈತರು ಬಲಿ
ಕಳೆದ 4 ವರ್ಷಗಳಿಂದ ಕಾಡಾನೆಗಳ ದಾಳಿಗೆ 8 ರೈತರು  ಬಲಿಯಾಗಿದ್ದಾರೆ. ಚಿರತೆ, ಕಾಡಾನೆ, ಕರಡಿ, ಕಾಡು ಹಂದಿಯ ಉಪಟಳವನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT