ಶುಕ್ರವಾರ, ಅಕ್ಟೋಬರ್ 30, 2020
27 °C

ಎನ್‍ಇಪಿ–ಅಧಿವೇಶನದಲ್ಲಿ ಚರ್ಚೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‍ಇಪಿ) ಸಮಗ್ರ ಚರ್ಚೆಗೆ ಒಳಪಡಿಸಿ, ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ವಿರೋಧ ಪಕ್ಷದ ನಾಯಕರಿಗೆ 'ಶಿಕ್ಷಣ ಸಂರಕ್ಷಿಸಿ ಭಾರತ ಉಳಿಸಿ ಸಮಿತಿ' ಮನವಿ ಮಾಡಿದೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಮಿತಿಯ ಪದಾಧಿಕಾರಿಗಳು ಈ ಕುರಿತು ಶನಿವಾರ ಮನವಿ ಸಲ್ಲಿಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ, 'ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ನೂತನ ಶಿಕ್ಷಣ ನೀತಿಯ ಕರಡು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ, ಇತರ ಭಾಷೆಗಳಲ್ಲಿ ಇಲ್ಲ. ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣವನ್ನು ರಾಜ್ಯ ಸರ್ಕಾರಗಳ ಸಹಮತ ಪಡೆಯದೆ, ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ' ಎಂದು ದೂರಿದರು.

'ಈ ನೀತಿಯಲ್ಲಿ ವಿದ್ಯಾರ್ಥಿ ಮತ್ತು ಶೈಕ್ಷಣಿಕ ಅಭಿವೃದ್ಧಿಯ ವಿರೋಧದ ಅಂಶಗಳು ಹೆಚ್ಚಾಗಿವೆ. ಶಿಕ್ಷಣದ ನೇರ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಿಕ್ಷಣ ಕ್ಷೇತ್ರ ಕುರಿತು ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದನ್ನು ವಿರೋಧಿಸಬೇಕು. ಮಾನ್ಯತೆ ಪಡೆದಿರುವ ಎಲ್ಲ ಭಾಷೆಗಳಿಗೆ ಈ ನೀತಿಯನ್ನು ಅನುವಾದಿಸಬೇಕು' ಎಂದು ಒತ್ತಾಯಿಸಿದರು.

'ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರ ಬಳಿ ಚರ್ಚಿಸಬೇಕು. ತಿದ್ದುಪಡಿಗೆ ಸಲಹೆಗಳನ್ನು ನೀಡಲು ಕಾಲಾವಕಾಶ ನೀಡಬೇಕು. ವಿಧಾನಮಂಡಲದ ಉಭಯ ಸದನಗಳಲ್ಲಿ ಇದರ ಸಮಗ್ರ ಚರ್ಚೆ ನಡೆಸಬೇಕು. ಎನ್‍ಇಪಿ ಅನುಷ್ಠಾನದ ತಯಾರಿಗಳನ್ನು ಕೈಬಿಡುವಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು' ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.