ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒಗೆ ಮಧ್ಯವರ್ತಿಗಳ ಬೆದರಿಕೆ: ದೂರು ದಾಖಲು

Last Updated 18 ಫೆಬ್ರುವರಿ 2019, 14:39 IST
ಅಕ್ಷರ ಗಾತ್ರ

ಶಿವಮೊಗ್ಗ:ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ನಡುವೆ ಜಟಾಪಟಿ ನಡೆದು ಆರ್‌ಟಿಒ ಕಚೇರಿ ರಣರಂಗವಾಗಿದ್ದ ಘಟನೆಯ ವೀಡಿಯೊ ತುಣುಕು ಎರಡು ದಿನಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರ್‌ಟಿಒ ಕಚೇರಿ ಒಳಗೆ ನುಗ್ಗಿದ್ದ ಮಧ್ಯವರ್ತಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಹಾಗೂ ಕಚೇರಿಯ ಸಿಬ್ಬಂದಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಚಪ್ಪಲಿ ತೋರಿಸಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ.

ಘಟನೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಶ್ರೀನಿವಾಸಯ್ಯ ಅವರು ಕಚೇರಿಯ ಪ್ರಥಮದರ್ಜೆ ಸಹಾಯಕ ಎನ್‌.ಮಂಜುನಾಥ್ ಮೂಲಕ ನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ (ಹಿಂದೆ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು), ಮೋಹನ್, ಅಲಸೆ ರಾಜು, ಲಕ್ಷ್ಮಣ್, ಜಾವೀದ್, ಮುನಾಫ್ ಹಾಗೂ ಸಿರಾಜ್ ವಿರುದ್ಧ ಸೋಮವಾರ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಚೇರಿಯಲ್ಲಿ ಶನಿವಾರಕೆಲಸ ಮಾಡುವಾಗ ಒಳಗೆ ನುಗ್ಗಿದ ಮಧ್ಯವರ್ತಿಗಳು ಚಪ್ಪಲಿಯಲ್ಲಿ ಹೊಡೆಯಲು ಮುಂದಾದರು. ನನಗೆ ಹಾಗೂ ಆರ್‌ಟಿಒ ಅವರ ಜಾತಿ ನಿಂದನೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬೆದರಿಕೆ ಹಾಕಿದರು ಎಂದು ಮಂಜುನಾಥ್ ದೂರಿನಲ್ಲಿ ವಿವರಿಸಿದ್ದಾರೆ.

‘ನಾನು ಇಲ್ಲಿಗೆ ಬಂದ ನಂತರ ಕಚೇರಿ ಒಳಗೆ ಮಧ್ಯವರ್ತಿಗಳನ್ನು ಬಿಡದಂತೆ ಕಡಿವಾಣ ಹಾಕಿದ್ದೇನೆ. ಎಲ್ಲಾ ಫೈಲ್‌ಗಳನ್ನೂ ತಕ್ಷಣ ವಿಲೇವಾರಿ ಮಾಡುವಂತೆ ಸೂಚಿಸಿದ್ದೇನೆ.ಶುಕ್ರವಾರ ಖಜಾನೆ ಬಳಿ ಮಧ್ಯವರ್ತಿಗಳು ಇರುವುದನ್ನು ಗಮನಿಸಿ, ಹೊರಗೆ ಕಳಿಸಿದ್ದೆ. ನನ್ನ ಈ ಕ್ರಮ ಅವರಲ್ಲಿ ಕೋಪ ತರಿಸಿರಬಹುದು’ ಎಂದು ಶ್ರೀನಿವಾಸಯ್ಯ ಪ್ರತಿಕ್ರಿಯೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘ, ದಲಿತ ಸಂಘಟನೆಗಳು ಘಟನೆಯನ್ನು ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT