ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯಾದ್ರಿ ಉತ್ಸವ ಲೋಗೊ ಬಿಡುಗಡೆ

Last Updated 5 ಜನವರಿ 2019, 14:45 IST
ಅಕ್ಷರ ಗಾತ್ರ

ಶಿವಮೊಗ್ಗ: ಜ. 23ರಿಂದ 27ರವರೆಗೆ ಶಿವಮೊಗ್ಗದಲ್ಲಿ ನಡೆಯುವ ಸಹ್ಯಾದ್ರಿ ಉತ್ಸವ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ವೈಭವದ ಅನಾವರಣಕ್ಕೆ ಸೂಕ್ತ ವೇದಿಕೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಉತ್ಸವದ ಲೋಗೊ ಹಾಗೂ ಘೋಷ ವಾಕ್ಯ ಅನಾವರಣಗೊಳಿಸಿ ಅವರು ಮಾತನಾಡಿದರು.

ಒಂದು ದಶಕದ ಸುದೀರ್ಘ ಅವಧಿಯ ಬಳಿಕ ಜಿಲ್ಲೆಯಲ್ಲಿ ಮತ್ತೆ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಸೀಮಿತ ಅನುದಾನ ಬಳಸಿಕೊಂಡು ಉತ್ಸವ ಆಚರಣೆಗೆ ಸಿದ್ಧತೆ ಆರಂಭಿಸಲಾಗಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಉತ್ಸವ ನಡೆಸಲು ಯೋಜಿಸಲಾಗಿದೆ ಎಂದರು.

ಉತ್ಸವ ಪರಂಪರೆ ನಿರಂತರವಾಗಿ ನಡೆಸುವ ಮೂಲಕ ಜಿಲ್ಲೆಯ ಕಲಾವಿದರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ದೊರಕುತ್ತದೆ. ಜಿಲ್ಲೆಯ ಜನರು ಸಾಂಸ್ಕೃತಿಕವಾಗಿ ಇನ್ನಷ್ಟು ಬೆಳೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಆಕರ್ಷಕ ಲೋಗೊ ಬಿಡುಗಡೆ:ಜಿಲ್ಲೆಯ ಭವ್ಯ ಸಂಸ್ಕೃತಿ, ಇತಿಹಾಸ, ಪ್ರವಾಸಿ ತಾಣಗಳು ಹಾಗೂ ಉತ್ಸವವನ್ನು ಪ್ರತಿನಿಧಿಸುವ ಲೋಗೊ ರಚನೆಗಾಗಿ ಹಾಗೂ ಅದಕ್ಕೆ ಪೂರಕವಾದ ಘೋಷ ವಾಕ್ಯ ರಚನೆಗಾಗಿ ಸಾರ್ವಜನಿಕರಿಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಲೋಗೊ ರಚನೆ ವಿಭಾಗದಲ್ಲಿ 26 ಪ್ರಸ್ತಾವ ಹಾಗೂ ಘೋಷ ವಾಕ್ಯದಲ್ಲಿ 100ಕ್ಕೂ ಅಧಿಕ ಪ್ರಸ್ತಾವ ಸ್ವೀಕರಿಸಲಾಗಿತ್ತು. ಭದ್ರಾವತಿಯ ಕೃಷ್ಣ ನಾಯರ್ ಅವರು ರಚಿಸಿರುವ ಲೋಗೊ ಹಾಗೂ ಘೋಷವಾಕ್ಯ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಭೂಪಟ ಬಳಸಿಕೊಂಡು ಲೋಗೊ ರಚಿಸಲಾಗಿದೆ. ಇದರಲ್ಲಿ ಜಿಲ್ಲೆಯ ಬೆಳೆಗಳಾದ ಭತ್ತ, ಅಡಿಕೆ, ಅಭಯಾರಣ್ಯ ಪ್ರತಿನಿಧಿಸುವ ಹುಲಿ, ಜಿಲ್ಲೆಯ ಹೆಮ್ಮೆಯ ಕಲೆ ಡೊಳ್ಳು, ಶಿವಪ್ಪ ನಾಯಕ, ಕುಪ್ಪಳ್ಳಿಯ ಕುವೆಂಪು ಮನೆ, ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆ ನೆನಪಿಸುವ ಈಸೂರು ಸೇರಿದಂತೆ ಹಲವಾರು ಅಂಶಗಳನ್ನು ಅಡಕಗೊಳಿಸಲಾಗಿದೆ. ‘ಇದು ಶಿವಮೊಗ್ಗ ದೃಶ್ಯ ಕಾವ್ಯ ಸಂಭ್ರಮ’ ಎಂಬ ಘೋಷ ವಾಕ್ಯ ಆಯ್ಕೆ ಮಾಡಲಾಗಿದೆ ಎಂದರು.

ಲೋಗೊ ರಚನೆಗೆ ₹7ಸಾವಿರ ಹಾಗೂ ಘೋಷವಾಕ್ಯ ರಚನೆಗೆ ₹3ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮ ನಾಯ್ಕ, ಉಪ ಕಾರ್ಯದರ್ಶಿ ಡಾ.ಎಸ್. ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕಿ ಮಂಗಳಾ ವೆಂ. ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT