ಮರಳು ಬ್ಲಾಕ್‌ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಕಡ್ಡಾಯ

7
ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೂಚನೆ

ಮರಳು ಬ್ಲಾಕ್‌ಗಳಲ್ಲೂ ಸಿಸಿಟಿವಿ ಕ್ಯಾಮೆರಾ ಕಡ್ಡಾಯ

Published:
Updated:
Deccan Herald

ಶಿವಮೊಗ್ಗ: ಚೆಕ್‌ಪೋಸ್ಟ್‌, ಸ್ಟಾಕ್‌ಯಾರ್ಡ್‌ಗಳ ಜತೆಗೆ ಎಲ್ಲ ಮರಳು ಬ್ಲಾಕ್‌ಗಳಲ್ಲೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತೀರ್ಥಹಳ್ಳಿಯಲ್ಲಿ 4, ಭದ್ರಾವತಿ, ಹೊಸನಗರ ತಾಲ್ಲೂಕುಗಳಲ್ಲಿ ತಲಾ 2 ಬ್ಲಾಕ್‌ಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಈ ಎಲ್ಲ ಬ್ಲಾಕ್‌ಗಳಿಗೂ ಸಿಸಿಟಿವಿ ಅಳವಡಿಸಬೇಕು. ಮರಳು ಸಾಗಣೆ ಲಾರಿಗಳ ತಪಾಸಣೆಗಾಗಿ 8 ಚೆಕ್‌ಪೋಸ್ಟ್‌ಗಳು ಇವೆ, ಅಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗಿದೆ. ಇನ್ನೂ 5 ಚೆಕ್‌ಪೋಸ್ಟ್ ತೆರೆಯಬೇಕು. ತಪಾಸಣೆ ಮತ್ತಷ್ಟು ಬಿಗಿಗೊಳಿಸಬೇಕು ಎಂದು ತಾಕೀತು ಮಾಡಿದರು.

ಮರಳು ಅಕ್ರಮದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಒಂದು ಲೋಡ್‌ಗೆ ಅನುಮತಿ ಪಡೆದು ಮೂರು, ನಾಲ್ಕು ಲೋಡ್‌ ಸಾಗಣೆ ಮಾಡಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಅಗತ್ಯವಿದ್ದರೆ ಗೃಹರಕ್ಷಕ ದಳದ ಸಿಬ್ಬಂದಿ ಬಳಸಿಕೊಳ್ಳಬೇಕು. ಅಕ್ರಮ ಮರಳು ತಡೆಯುವ ಜವಾಬ್ದಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು ಎಂಬ ಮನೋಭಾವ ತೊರೆದು, ಎಲ್ಲ ಇಲಾಖೆಗಳೂ ಕೈ ಜೋಡಿಸಬೇಕು. ಪೊಲೀಸರು ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

ಮರಳು ಸಮರ್ಪಕ ವಿತರಣೆಗೆ, ಅಕ್ರಮ ತಡೆಗೆ ತಾಲ್ಲೂಕು ಮಟ್ಟದಲ್ಲಿ ನಿರಂತರ ಸಭೆ ನಡೆಸಬೇಕು. ಇಬ್ಬರು ಉಪ ವಿಭಾಗಾಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಮರಳು ದಂಧೆಯ್ಲಲಿ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಅಪವಾಧವಿದೆ. ಅದನ್ನು ತೊಡೆದು ಹಾಕಲು ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇತರೆ ಅಧಿಕಾರಿಗಳು ಪರಸ್ಪರ ಸಹಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಮರಳು ಸಾಗಣೆಗೆ ಬಳಸುವ ಬಹುತೇಕ ಲಾರಿಗಳು 6 ಚಕ್ರ ಒಳಗೊಂಡಿವೆ. ಜಿಪಿಎಸ್ ಒಳಗೊಂಡ ಲಾರಿಗಳಿಗೆ ಮಾತ್ರ ಅನುಮತಿ ನೀಡಬೇಕು. ಎಲ್ಲ ಲಾರಿಗಳಿಗೂ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಖರೆ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಸಾರಿಗೆ ಇಲಾಖೆ ಉಪ ಆಯುಕ್ತ ಶಿವರಾಜ್ ಪಾಟೀಲ್, ಹಿರಿಯ ಭೂ ವಿಜ್ಞಾನಿ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !