ಬುಧವಾರ, ಏಪ್ರಿಲ್ 8, 2020
19 °C
ಚಲನಚಿತ್ರ ನಿರ್ದೇಶಕ ಲಾಯಪ್ಪ ಇಂಗಳೆ ಅಭಿಮತ

ಕಾಯಕ ಶರಣರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕಾಯಕ ಶರಣರನ್ನು ಅಂದು ಪಂಚಕರ್ಮರು ಅಂತ ಕೆರೆಯಲಾಗುತ್ತಿತ್ತು. ಅವರು ಕಾಯಕ, ದಾಸೋಹ ಹಾಗೂ ವಚನಗಳಿಂದ ಸಮಾಜವನ್ನು ತಿದ್ದುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು’ ಎಂದು ಚಲನಚಿತ್ರ ನಿರ್ದೇಶಕ ಲಾಯಪ್ಪ ಇಂಗಳೆ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದಾರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಮೇಲೆ ಜಾತಿ ಮಾಡಬಾರದು. ಯಾವ ಕಾಯಕವೂ ದೊಡ್ಡದಲ್ಲ, ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನಭಾವರು ಈ ಕಾಯಕ ಶರಣರು’ ಎಂದು ಅಭಿಪ್ರಾಯಪಟ್ಟರು.

‘ಮಾದಾರ ಚನ್ನಯ್ಯ ಅವರು ಬಸವಣ್ಣರಿಗಿಂತ ಹಿರಿಯರಾಗಿದ್ದು, ಚರ್ಮದ ಚಪ್ಪಲಿ ಹೊಲೆಯುವ ಕಾಯಕ ಮಾಡುತ್ತಿದ್ದರು. ಅವರ ವಚನದ ಅಂಕಿತ ನಾಮವನ್ನು ತನ್ನ ಪರಿಕರಣಗಳನ್ನೆ ಮಾಡಿಕೊಂಡ ೇಕೈಕ ವಚನಕಾರ ಮಾದಾರ ಚನ್ನಯ್ಯ ಅವರಾಗಿದ್ದಾರೆ. ಅವರು ತಮ್ಮ ಕಾಯಕದಿಂದಲೇ ಶಿವನನ್ನು ಒಲಿಸಿಕೊಂಡು, ಅಂಬಲಿಯನ್ನು ಸೇವೆಗೆ ನೀಡಿದ್ದ ಮಹಾನ್‌ ಕಾಯಕಯೋಗಿ ಆಗಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದ ಅನೇಕ ಅಸಮಾನತೆಗಳನ್ನು ದೂರ ಮಾಡುವಲ್ಲಿ ಮಾದಾರ ಚನ್ನಯ್ಯ ಅಗ್ರಗಣ್ಯರಾಗಿದ್ದಾರೆ’ ಎಂದು ಹೇಳಿದರು.

‘ಮಾದಾರ ಧೂಳಯ್ಯ ಒಬ್ಬ ಪ್ರಖರ ವಚನಕಾರರಾಗಿದ್ದರು. ಇವರು ತಮ್ಮ ಜೀವನದಲ್ಲಿ ಒಟ್ಟು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಢೋಹರ ಕಕ್ಕಯ್ಯ ಅವರು ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಕೇವಲ ಆರು ವಚನಗಳು ಮಾತ್ರ. ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಇಬ್ಬರು ಮಹಾನ್‌ ವ್ಯಕ್ತಿಗಳಾಗಿದ್ದರು. ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಸಂಗಮೇಶ ಬಾದಾಮಿ, ಅಶೋಕ ಸೌದಾಗರ, ಹಾದಿರಾಮ ಪವಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)